ADVERTISEMENT

ಮಲ್ಲಿಗೆ ಉಳಿಸಿದ ಧೀರ ರೈತ!

ಸಿ.ಶಿವಾನಂದ
Published 8 ಸೆಪ್ಟೆಂಬರ್ 2019, 9:59 IST
Last Updated 8 ಸೆಪ್ಟೆಂಬರ್ 2019, 9:59 IST
ಕೊಡದಿಂದ ಮಲ್ಲಿಗೆ ಹೂವಿನ ಗಿಡಕ್ಕೆ ನೀರು ಹಾಕುತ್ತಿರುವ ಫಕ್ರುದ್ದೀನ್‌ ಸಾಹೇಬ್‌
ಕೊಡದಿಂದ ಮಲ್ಲಿಗೆ ಹೂವಿನ ಗಿಡಕ್ಕೆ ನೀರು ಹಾಕುತ್ತಿರುವ ಫಕ್ರುದ್ದೀನ್‌ ಸಾಹೇಬ್‌   

ಹಗರಿಬೊಮ್ಮನಹಳ್ಳಿ: ಸಮರ್ಪಕವಾಗಿ ಮಳೆಯಾಗದ ಕಾರಣ ಹಲವು ರೈತರು ಚಿಂತಕ್ರಾಂತರಾಗಿದ್ದಾರೆ. ಆದರೆ, ತಾಲ್ಲೂಕಿನ ಬಲ್ಲಾಹುಣ್ಸಿ ಗ್ರಾಮದ ರೈತ ಫಕ್ರುದ್ದೀನ್‌ ಸಾಹೇಬ್‌ ಅದಕ್ಕೆ ಎದೆಗುಂದದೆ ಕೊಡಗಳಿಂದ ಪ್ರತಿಯೊಂದು ಗಿಡಗಳಿಗೆ ನೀರು ಹಾಕಿ, ಮಲ್ಲಿಗೆ ಹೂವಿನ ಗಿಡಗಳನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಮಳೆಯಾಗದ ಕಾರಣ ಅಂತರ್ಜಲ ಕುಸಿದಿದೆ. ಫಕ್ರುದ್ದೀನ್‌ ಅವರ ಕೊಳವೆಬಾವಿಯಲ್ಲಿ ಅಲ್ಪ ನೀರಿದೆ. ಅದನ್ನು ಹೊಲದಲ್ಲಿ ನಿರ್ಮಿಸಿರುವ ಗುಂಡಿಗೆ ಬಿಟ್ಟು, ಅಲ್ಲಿಂದ ತನ್ನಿಬ್ಬರು ಮಕ್ಕಳೊಂದಿಗೆ ಕೊಡಗಳಲ್ಲಿ ನೀರು ತಂದು, ಗಿಡಗಳಿಗೆ ಹರಿಸುತ್ತಿದ್ದಾರೆ. ನೀರು ಅನಗತ್ಯವಾಗಿ ಬಿಡದೆ, ಬೆಳೆಗೆ ಎಷ್ಟು ಬೇಕೋ ಅಷ್ಟೇ ಹರಿಸಿ ಮಿತವಾಗಿ ನೀರು ಬಳಸುತ್ತಿದ್ದಾರೆ.

‘ಸತತ ಮೂರು ವರ್ಷಗಳಿಂದ ಬರ ಇದೆ. ಅಂದಿನಿಂದ ಹೀಗೆಯೇ ಕೊಡಗಳಲ್ಲಿ ನೀರು ತಂದು ಗಿಡಗಳಿಗೆ ಉಣಿಸುತ್ತಿದ್ದೇನೆ. ಮಳೆ ಬಂದಿಲ್ಲವೆಂದು ಸುಮ್ಮನೆ ಕೂರಲು ಮನಸ್ಸಾಗಲಿಲ್ಲ. ಏನಾದರೂ ಆಗಲಿ ಎಂದು ಕೈಹಾಕಿದೆ. ಬೆಳೆ ಚೆನ್ನಾಗಿ ಬಂದಿದೆ. ಆದರೆ, ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ’ ಎಂದು ಫಕ್ರುದ್ದೀನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇತ್ತೀಚೆಗೆ ₹35,000 ಖರ್ಚು ಮಾಡಿ 400 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ಹನಿ ನೀರು ದೊರೆಯಲಿಲ್ಲ. ಈಗಿರುವ ಕೊಳವೆಬಾವಿಯ ಅತ್ಯಲ್ಪ ಪ್ರಮಾಣದ ನೀರನ್ನು ಸಣ್ಣ ಗುಂಡಿಗೆ ಬಿಟ್ಟು, ಅಲ್ಲಿಂದ ಅರ್ಧ ಎಚ್‍.ಪಿ. ಮೋಟಾರ್ ಮೂಲಕ ಪಂಪ್ ಮಾಡಿ ಕೊಡಗಳಿಂದ ನೀರು ಹಾಕುವುದು ಪ್ರತಿದಿನದ ಕೆಲಸವಾಗಿದೆ.ಜಮೀನಿನಲ್ಲಿ 760 ಗಿಡಗಳಿವೆ, 200 ದುಂಡು ಮಲ್ಲಿಗೆ ಇದ್ದು ಆಂಧ್ರ ಪ್ರದೇಶದಲ್ಲಿ ಖರೀದಿಸಿ ತಂದಿದ್ದೇನೆ. ಇನ್ನುಳಿದ ಗಿಡಗಳನ್ನು ಹೂವಿನಹಡಗಲಿಯಲ್ಲಿ ಖರೀದಿಸಿರುವೆ. ಒಂದು ಸಾಲಿಗೆ 16 ಗಿಡಗಳನ್ನು ನೆಟ್ಟಿರುವೆ’ ಎಂದು ವಿವರಿಸಿದರು.

ಇಲ್ಲಿ ಬೆಳೆದಿರುವ ದುಂಡು ಮಲ್ಲಿಗೆಗೆ ಭಾರಿ ಬೇಡಿಕೆ ಇದೆ. ಹೊಸಪೇಟೆಯಿಂದ ಖರೀದಿದಾರರು ಸ್ಥಳಕ್ಕೆ ಬಂದು ಕೊಂಡೊಯ್ಯುತ್ತಾರೆ. ಫಕ್ರುದ್ದೀನ್‌ ಅವರ ಕೆಲಸಕ್ಕೆ ಅವರ ಮಗ ಷರೀಫ್ ಸಾಹೇಬ್ ಜೊತೆಯಾಗಿದ್ದಾರೆ. ತನ್ನ ತಂದೆಯೊಂದಿಗೆ ಬೆಳಗಿನ ಜಾವದಿಂದಲೇ ತೋಟದ ಗಿಡಗಳಿಗೆ ಕೊಡದ ಮೂಲಕ ನೀರು ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.