
ಬಳ್ಳಾರಿ: ‘ಜಿಲ್ಲೆಯಲ್ಲಿನ ರಾಜಕೀಯ ಹಿಂಸಾಚಾರ, ಶಾಂತಿ ಭಂಗದ ವಾತಾವರಣ ಕೊನೆಗೊಳಿಸಬೇಕು. ಅಕ್ರಮ, ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದ ಸಂಘಟನೆಯ ಮುಖಂಡರು, ಕಾರ್ಯಕರ್ತರು ಜಿಲ್ಲೆಯ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿದರು.
‘ಬಳ್ಳಾರಿ ನಗರದಲ್ಲಿ ಜ. 1ರಂದು ನಡೆದ ಗಲಭೆ ಪ್ರಕರಣ, ಸಾವು, ರಾಜಕೀಯ ಕೆಸರೆರಚಾಟವು ಸಾಮಾನ್ಯ ಜನರು ಭಯ ಬೀತರಾಗುವಂತೆ ಮಾಡಿವೆ. ಇದು ಖಂಡನೀಯ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನ ನೀಡದೆ ಕೇವಲ ಪ್ರತಿಷ್ಟೆಗಾಗಿ ಜನತೆಯನ್ನು ಪರಸ್ಪರ ಎತ್ತಿ ಕಟ್ಟುವುದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ನಡೆದಿದೆ’ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.
‘ಈ ಘಟನೆಗಳ ಬಗ್ಗೆ ಆಳವಾದ, ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ಜತೆಗೆ, ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಕಾರ್ಯಕ್ರಮ ಹಾಳುಗೆಡವಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪೂರ್ವಯೋಜಿತವಾಗಿ ಕೃತ್ಯ ನಡೆಸಿವೆ ಎಂಬುದರ ತನಿಖೆಯೂ ಆಗಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಕುಡುತಿನಿಯಲ್ಲಿ ಕೈಗಾರಿಕೆಗಳು ಆರಂಭವಾಗಬೇಕು. ಭೂ ಸಂತ್ರಸ್ತರ ಹೋರಾಟವನ್ನು ಪರಿಗಣಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ನೀಡಬೇಕು’ ಎಂದರು.
‘ಜಿಲ್ಲೆಯಲ್ಲಿ ಹಲವು ಅಕ್ರಮದಂಧೆಗಳು ನಡೆಯುತ್ತಿವೆ. ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಜೂಜು, ಇಸ್ಪಿಟ್ ಕ್ಲಬ್‌ಗಳು, ಮಟಕ, ಡ್ರಗ್ಸ್, ಗಾಂಜಾ, ವೈಶ್ಯಾವಾಟಿಕೆಗಳು ಮತ್ತು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವೂ ಸಾಮಾನ್ಯವಾಗಿದೆ. ಅದಕ್ಕೆ ಪ್ರಭಾವಿಗಳ ಬೆಂಬಲ ಇದೆ. ಜಿಲ್ಲೆಯಲ್ಲಿ ಗೂಂಡಾ ಸಂಸ್ಕೃತಿ ಹೆಚ್ಚುತ್ತಿದೆ. ಇದು ನಿಯಂತ್ರಣಕ್ಕೆ ಬರಬೇಕು’ ಎಂದು ಪಕ್ಷ ಆಗ್ರಹಿಸಿದೆ.
‘ಸಂಡೂರು ತಾಲೂಕಿನ ಉಬ್ಬಲಗಂಡಿ ಗ್ರಾಮದ ದೋಣಿ ಮಲೈ ಬ್ಲಾಕ್ ಮತ್ತು ಉಬ್ಬಲಗಂಡಿ ಮೀಸಲು ಅರಣ್ಯದಲ್ಲಿ ಜೆಎಸ್‌ಡಬ್ಲ್ಯೂ ಸ್ಟಿಲ್ ಲಿಮಿಟೆಡ್ ಮರಗಳನ್ನು ಕಡಿದು ಬೆಂಕಿ ಹಚ್ಚಿ ಕಾಡು ನಾಶ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಎನ್‌ಎಂಡಿಸಿಯು ಗಣಿ ತ್ಯಾಜ್ಯವನ್ನು ಉಬ್ಬಲಗಂಡಿ ವೀರಭದ್ರ ದೇವಸ್ಥಾನದತ್ತ ಸುರಿಯುತ್ತಿದೆ. ನಿರಂತರ ಬ್ಲಾಸ್ಟಿಂಗ್ ನಿಂದ ವಾಡೆಗಳಿಗೆ ಧಕ್ಕೆ ಒದಗುವ ಅಪಾಯವಿದೆ. ಅದನ್ನು ತಡೆಯಬೇಕು’ ಎಂದು ಹೇಳಿದೆ.
‘ಜಿಲ್ಲೆಯಲ್ಲಿ ಅರಣ್ಯ ಭೂಮಿ ಒಳಗೊಂಡು, ಬಗರ್ ಹುಕುಂ ಜಮೀನುಗಳಿಗೆ ಪಟ್ಟಾ ನೀಡುವ ಕ್ರಮಗಳನ್ನು ಕೂಡಲೇ ವಹಿಸಬೇಕು’ ಎಂದು ಸಿಪಿಐಎಂ ಆಗ್ರಹಿಸಿದೆ.
ಮುಖಂಡರಾದ ಯು. ಬಸವರಾಜು, ಸತ್ಯಬಾಬು, ಜೆ ಚಂದ್ರಕುಮಾರಿ, ಎರ್ರಿಸ್ವಾಮಿ ಮತ್ತಿತರರು ಇದ್ದರು.