ADVERTISEMENT

PV Web Exclusive: ಹಂಪಿ ಬೈ ನೈಟ್‌; ಕೊನೆಗೂ ಮುಹೂರ್ತ

ದಶಕದಿಂದ ನನೆಗುದಿಗೆ ಬಿದ್ದಿದ ಯೋಜನೆ ಕೊನೆಗೂ ಜಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಸೆಪ್ಟೆಂಬರ್ 2020, 1:40 IST
Last Updated 22 ಸೆಪ್ಟೆಂಬರ್ 2020, 1:40 IST
ಸಾಸಿವೆಕಾಳು ಗಣಪ ಸ್ಮಾರಕ
ಸಾಸಿವೆಕಾಳು ಗಣಪ ಸ್ಮಾರಕ   
""
""
""
""
""

ಹೊಸಪೇಟೆ: ದಶಕದ ಮಹತ್ವಕಾಂಕ್ಷಿ ಯೋಜನೆ ಹಂಪಿ ಬೈ–ನೈಟ್‌ಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಬರುವ ಅಕ್ಟೋಬರ್‌ 9ರಂದು ಯೋಜನೆಗೆ ಅಧಿಕೃತವಾಗಿ ಚಾಲನೆ ಕೊಡಲು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಯೋಜನೆ ವ್ಯಾಪ್ತಿಗೆ ಮೊದಲ ಹಂತದಲ್ಲಿ 17 ಸ್ಮಾರಕಗಳನ್ನು ಸೇರಿಸಲಾಗಿದೆ.

ಅಂದಹಾಗೆ, ಈ ಯೋಜನೆ ಹತ್ತು ವರ್ಷ ವಿಳಂಬವಾಗಿ ಆರಂಭಗೊಳ್ಳುತ್ತಿದೆ. ದಶಕದ ಹಿಂದೆ ಈ ಯೋಜನೆ ಆರಂಭಿಸಲು ರಾಜ್ಯ ಸರ್ಕಾರ ₹11 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ವಿವಿಧ ಕಾರಣಗಳಿಂದ ಯೋಜನೆ ಕಾರ್ಯರೂಪಕ್ಕೆ ಬಂದಿರಲಿಲ್ಲ.

ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಹಂಪಿಯ ಕಮಲ ಮಹಲ್‌

ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌ ಅವರು ವಿಶೇಷ ಆಸ್ಥೆ ವಹಿಸಿ, ಯೋಜನೆಗೆ ಅಂತಿಮ ಸ್ವರೂಪ ನೀಡಿದ್ದಾರೆ. ಈ ಸಾಲಿನ ಜನವರಿಯಲ್ಲಿ ಹಮ್ಮಿಕೊಂಡಿದ್ದ ‘ಹಂಪಿ ಉತ್ಸವ’ದ ಸಂದರ್ಭದಲ್ಲೇ ಯೋಜನೆಗೆ ಚಾಲನೆ ಕೊಡಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ತಾಂತ್ರಿಕ ತೊಡಕುಗಳಿಂದ ಅದು ಸಾಧ್ಯವಾಗಿರಲಿಲ್ಲ.

ADVERTISEMENT

ಬಳಿಕ ಎಲ್ಲ ಲೋಪ ದೋಷಗಳನ್ನು ಸರಿಪಡಿಸಿ, ಮಾರ್ಚ್‌ 3ರಂದು ಪ್ರಾಯೋಗಿಕವಾಗಿ ಯೋಜನೆಗೆ ಹಸಿರು ನಿಶಾನೆ ಕೊಡಲಾಗಿತ್ತು. ಇನ್ನೇನು ಅಧಿಕೃತವಾಗಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕೆಂಬ ಹಂತದಲ್ಲಿದ್ದಾಗ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿತ್ತು.

ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ

ಈಗ ಲಾಕ್‌ಡೌನ್‌ ತೆರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಮುಖ ಮಾಡಿರುವುದರಿಂದ ಅ. 9ರಂದು ಯೋಜನೆಗೆ ಚಾಲನೆ ಕೊಡಲು ತೀರ್ಮಾನಿಸಲಾಗಿದೆ.

ಸುಡುವ ಬಿಸಿಲಿನಲ್ಲಿ ಹಂಪಿ ಸ್ಮಾರಕಗಳನ್ನು ನೋಡಲು ಇಷ್ಟಪಡದವರು ರಾತ್ರಿ ವೇಳೆ ವಿದ್ಯುದ್ದೀಪಗಳ ಬೆಳಕಿನಲ್ಲಿ ನೋಡಬಹುದು. ದೇಶ–ವಿದೇಶಗಳ ಶ್ರೀಮಂತ ವರ್ಗದವರನ್ನು ಆಕರ್ಷಿಸಿ ಪ್ರವಾಸೋದ್ಯಮ ಬೆಳೆಸುವುದು ಯೋಜನೆಯ ಹಿಂದಿರುವ ಮಹತ್ತರ ಉದ್ದೇಶ.

ಆನೆಸಾಲು ಮಂಟಪ

ಏನಿದು ಬೈ ನೈಟ್‌?:

ಹಂಪಿಯ 17 ಪ್ರಮುಖ ಸ್ಮಾರಕಗಳಿಗೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ವಿರೂಪಾಕ್ಷೇಶ್ವರ ದೇಗುಲದ ಬಿಷ್ಟಪ್ಪಯ್ಯ ಗೋಪುರ, ಕುದುರೆಗೊಂಬೆ ಮಂಟಪ, ಗೆಜ್ಜಲ ಮಂಟಪ, ನರಸಿಂಹ ದೇವಸ್ಥಾನ, ನದಿದಂಡೆಯ ಗುಹೆ, ಚಕ್ರತೀರ್ಥ, ಹಸ್ತಗಿರಿ ರಂಗನಾಥ, ಅಚ್ಯುತ ಮಂಟಪ, ಅಚ್ಯುತರಾಯ ದೇವಸ್ಥಾನ, ವರಾಹ ದೇವಸ್ಥಾನ, ಆನೆಸಾಲು ಮಂಟಪ, ಕಮಲ ಮಹಲ್‌, ವಿರೂಪಾಕ್ಷ ಬಜಾರ್‌, ವಿಷ್ಣು ದೇವಸ್ಥಾನ, ಸುಗ್ರೀವ ಗುಹೆ, ಪುರಾತನ ಸೇತುವೆ, ರಾಜನ ತುಲಾಭಾರ ಸ್ಮಾರಕಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.

ಸಂಜೆ 7.30ರಿಂದ ರಾತ್ರಿ 9.30ರ ವರೆಗೆ ಬೈ ನೈಟ್‌ ವೀಕ್ಷಿಸಲು ಸಮಯ ನಿಗದಿಗೊಳಿಸಲಾಗಿದೆ. ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಸ್ಮಾರಕಗಳ ವೀಕ್ಷಣೆಗೆ ಕರೆದೊಯ್ಯಲಾಗುತ್ತದೆ. ಕೆಲವು ಸ್ಮಾರಕಗಳ ಬಳಿ ಮಿನಿ ಬಸ್ಸುಗಳಲ್ಲಿ ಕರೆದೊಯ್ದರೆ, ಕೆಲವೆಡೆ ಬ್ಯಾಟರಿಚಾಲಿತ ವಾಹನಗಳಲ್ಲಿ ಕರೆದೊಯ್ಯಲಾಗುತ್ತದೆ. ಒಬ್ಬರಿಗೆ ತಲಾ ₹2,500 ಶುಲ್ಕ ನಿಗದಿಪಡಿಸಲಾಗಿದೆ.

ಶೀಘ್ರದಲ್ಲೇ ಎದುರು ಬಸವಣ್ಣ ಮಂಟಪ, ಕೋದಂಡರಾಮ ದೇವಸ್ಥಾನದ ಬಳಿ ಕಾರ್ಯಕ್ರಮ ನಡೆಸಿ, ಲೇಸರ್‌ ಕಿರಣಗಳ ಮೂಲಕ, ಹಿನ್ನೆಲೆ ಧ್ವನಿಯೊಂದಿಗೆ ವಿಜಯನಗರ ಸಾಮ್ರಾಜ್ಯದ ವೈಭವ ಮರುಸೃಷ್ಟಿ ಮಾಡಿ, ವಿವರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದು ಆರಂಭಗೊಂಡರೆ ಇನ್ನಷ್ಟು ಮೆರಗು ಬರಲಿದೆ.

************
ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಅ. 9ರಿಂದ ಸಾರ್ವಜನಿಕರ ವೀಕ್ಷಣೆಗೆ ಬೈ ನೈಟ್‌ ಮುಕ್ತಗೊಳಿಸಲಾಗುವುದು.
–ಪಿ.ಎನ್‌. ಲೋಕೇಶ್‌, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.