ADVERTISEMENT

ಹೊಸಪೇಟೆ: ವಸತಿ ರಹಿತ ಪೌರಕಾರ್ಮಿಕರ ಸರ್ವೇಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 9:54 IST
Last Updated 30 ಸೆಪ್ಟೆಂಬರ್ 2022, 9:54 IST
ಅನಿರುದ್ಧ್‌ ಶ್ರವಣ್‌ ಪಿ.
ಅನಿರುದ್ಧ್‌ ಶ್ರವಣ್‌ ಪಿ.   

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಾದ್ಯಂತ ನಿವೇಶನ, ವಸತಿ ರಹಿತ ಪೌರ ಕಾರ್ಮಿಕರ ಸರ್ವೇ ನಡೆಸಿ, ಹೊಸಬರ ಸೇರ್ಪಡೆ ಅಥವಾ ಹೆಸರು ತಿದ್ದುಪಡಿಗಳಿದ್ದಲ್ಲಿ ಶೀಘ್ರ ಪೂರ್ಣಗೊಳಿಸಿ ಪಟ್ಟಿ ತಯಾರಿಸಿ ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಸೂಚಿಸಿದರು.

ನಗರದಲ್ಲಿ ಗುರುವಾರ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ಹಾಗೂ ಪರಿಶಿಷ್ಟ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಕನಿಷ್ಠ ವೇತನ, ಇ.ಎಸ್.ಐ,., ಪಿ.ಎಫ್ ಹಾಗೂ ವಿಮೆ ಕಂತುಗಳ ಪಾವತಿ ಕುರಿತು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವುಗಳನ್ನು ವಿಲೇವಾರಿ ಮಾಡಬೇಕೆಂದು ತಿಳಿಸಿದರು.

ನಗರಸಭೆ, ಕಮಲಾಪುರ ಪಟ್ಟಣ ಪಂಚಾಯಿತಿ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶೌಚಾಲಯಗಳ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಕೂಡ್ಲಿಗಿಯಿಂದ 51, ಕೊಟ್ಟೂರಿನಿಂದ 5, ಹಗರಿಬೊಮ್ಮನಹಳ್ಳಿಯಿಂದ 10 ಅರ್ಜಿಗಳು ಬಂದಿವೆ. ಹರಪನಹಳ್ಳಿ, ಹೂವಿನಹಡಗಲಿ, ಕಮಲಾಪುರ ಹಾಗೂ ಮರಿಯಮ್ಮನಹಳ್ಳಿಯಿಂದ ಅರ್ಜಿಗಳು ಬಂದಿಲ್ಲ ಎಂದು ಸಫಾಯಿ ಕರ್ಮಚಾರಿಗಳ ನಾಮನಿರ್ದೇಶಿತ ಸದಸ್ಯ ರಾಮುಡು ಸಭೆಯ ಗಮನ ಸೆಳೆದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವೀರನಗೌಡ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.