ಬಳ್ಳಾರಿ: ದೀಪಾವಳಿ ಸಮಯದಲ್ಲಿ ಸಾರ್ವಜನಿಕರು ನಿಷೇಧಿತ ಪಟಾಕಿ, ಸಿಡಿಮದ್ದುಗಳನ್ನು ಬಿಟ್ಟು ಹಸಿರು ಪಟಾಕಿ ಬಳಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಪಟಾಕಿ ಮತ್ತು ಸಿಡಿಮದ್ದು ಅನಧಿಕೃತ ತಯಾರಿಕೆ ಹಾಗೂ ಮಾರಾಟ ಮಾಡುವ ಅಂಗಡಿಗಳನ್ನು ಬಂದ್ ಮಾಡಿಸುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮಿಶ್ರಾ ಸೂಚಿಸಿದ್ದಾರೆ.
ದೀಪಾವಳಿ ವೇಳೆಯಲ್ಲಿ ಪಟಾಕಿಗಳಿಂದಾಗುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಸಿರು ಪಟಾಕಿಯಲ್ಲದ, ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದಲ್ಲಿ ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.
ಹಸಿರು ಪಟಾಕಿ ಮಾತ್ರ ಸಾರ್ವಜನಿಕರು ಬಳಸುವಂತೆ ಜಾಗೃತಿ ಮೂಡಿಸಬೇಕು. ಹಸಿರು ಪಟಾಕಿ ತಯಾರಿಕೆ ಹಾಗೂ ಮಾರಾಟಗಾರರಿಗೆ ಮತ್ತು ನಿಗದಿತ ಏಜೆಂಟ್‍ಗಳಿಗೆ ಮಾತ್ರ ಅನುಮತಿ ನೀಡಬೇಕು. ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ನಾವುದೇ ನಿಷೇಧಿತ ಪ್ರದೇಶದಲ್ಲಿ ಪಟಾಕಿಗಳನ್ನು ಸ್ಫೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ, ಇದನ್ನು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.