ADVERTISEMENT

ಬೆಳಕಿನ ಹಬ್ಬಕ್ಕೆ ಖರೀದಿ ಭರಾಟೆ

ಬಾಳೆದಿಂಡು, ಹೂ, ಹಣ್ಣು ಹಾಗೂ ಪಟಾಕಿ ಭರ್ಜರಿ ಮಾರಾಟ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 11:25 IST
Last Updated 7 ನವೆಂಬರ್ 2018, 11:25 IST
ಹೊಸಪೇಟೆಯ ಮೇನ್ ಬಜಾರ್‌ನಲ್ಲಿ ಬುಧವಾರ ಜನ ಹೂ, ಬಾಳೆದಿಂಡು ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಮೇನ್ ಬಜಾರ್‌ನಲ್ಲಿ ಬುಧವಾರ ಜನ ಹೂ, ಬಾಳೆದಿಂಡು ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಲು ಮುಂದಾಗಿರುವ ಜನ ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಬುಧವಾರ ಕಂಡು ಬಂತು.

ನರಕ ಚತುರ್ದಶಿಯಿಂದಲೇ ಹಬ್ಬದ ವಿಧಿ ವಿಧಾನಗಳು ಆರಂಭವಾಗಿದ್ದು, ಗುರುವಾರ ಆಚರಿಸಲಾಗುವ ಬಲಿಪಾಡ್ಯಮಿ ವರೆಗೆ ಮುಂದುವರಿಯಲಿದೆ. ಹಬ್ಬಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ಜನ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸಲು ಮುಗಿ ಬಿದ್ದಿರುವುದು ಕಂಡು ಬಂತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ, ಅದರ ಎದುರಿನ ಮುಖ್ಯರಸ್ತೆ, ಸೋಗಿ ಮಾರುಕಟ್ಟೆ ಹಾಗೂ ಮಹಾತ್ಮ ಗಾಂಧಿ ವೃತ್ತದಿಂದ ಪುಣ್ಯಮೂರ್ತಿ ವೃತ್ತದ ವರೆಗೆ ಜನಜಾತ್ರೆಇತ್ತು.

ಮಂಗಳವಾರ ಸಂಜೆ ಹಾಗೂ ಬುಧವಾರ ಎಲ್ಲಿ ನೋಡಿದರಲ್ಲಿ ಜನದಟ್ಟಣೆ ಇತ್ತು. ಇದರಿಂದಾಗಿ ಮೇನ್‌ ಬಜಾರ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರು ದಿನವಿಡೀ ಬೆವರು ಹರಿಸಿದರು.

ADVERTISEMENT

ವಿವಿಧ ಕಡೆಗಳಿಂದ ಬಂದಿದ್ದ ಜನ ಹೂ, ಹಣ್ಣು, ಬಾಳೆದಿಂಡು, ಮಾವಿನ ಎಲೆ, ಕಾಯಿ, ಕರ್ಪೂರ, ಅಗರಬತ್ತಿ, ವಿವಿಧ ಬಗೆಯ ಹಣತೆಗಳನ್ನು ಖರೀದಿಸಿದರು. ಇನ್ನು ಪಟಾಕಿಯಿಲ್ಲದೆ ಹಬ್ಬ ಅಪೂರ್ಣ. ಇಲ್ಲಿನ ಮೀರ್‌ ಆಲಂ ಚಿತ್ರಮಂದಿರಕ್ಕೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಜನ ಕುಟುಂಬ ಸದಸ್ಯರೊಂದಿಗೆ ಬಂದು ತರಹೇವಾರಿ ಪಟಾಕಿಗಳನ್ನು ಖರೀದಿಸಿ ಕೊಂಡೊಯ್ದರು.

ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಅವುಗಳ ಬೆಲೆ ತುಸು ಜಾಸ್ತಿಯಾಗಿದೆ. ₨10ರಿಂದ ₨15ಕ್ಕೆ ಇದ್ದ ಒಂದು ಮಾರುದ್ದ ಚೆಂಡು ಹೂವಿನ ಬೆಲೆ ₨25ರಿಂದ ₨30ಕ್ಕೆ ಏರಿದೆ. ಅದೇ ರೀತಿ ಸೇಬು, ಕಿತ್ತಳೆ ಸೇರಿದಂತೆ ಇತರೆ ಹಣ್ಣುಗಳ ಬೆಲೆಯೂ ₨20ರಿಂದ ₨30ರಷ್ಟು ಏರಿಕೆ ಕಂಡಿದೆ. ಆದರೆ, ಜನ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

ಎಲ್ಲೆಡೆ ಪಟಾಕಿ ಸದ್ದು:

ಮಂಗಳವಾರ ಹಾಗೂ ಬುಧವಾರ ಸಂಜೆ ಎಲ್ಲರ ಮನೆಗಳು ಆಕಾಶಬುಟ್ಟಿ ಹಾಗೂ ದೀಪಗಳಿಂದ ಕಂಗೊಳಿಸಿದವು. ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಲಕ್ಷ್ಮಿಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರು. ಅದಾದ ನಂತರ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು, ಮನೆ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಗುರುವಾರ ನಗರದ ಬಹುತೇಕ ಮಳಿಗೆಗಳಲ್ಲಿ ಪೂಜಾ ಕಾರ್ಯಕ್ರಮವಿದ್ದು, ಈಗಾಗಲೇ ಅವುಗಳಿಗೆ ಸುಣ್ಣ, ಬಣ್ಣ ಬಳಿದು, ಹೂಗಳಿಂದ ಅಲಂಕರಿಸಲಾಗಿದ. ಸಂಜೆ ಪೂಜೆ ನೆರವೇರಿಸಿದ ನಂತರ ಎಲ್ಲೆಡೆ ಪಟಾಕಿಗಳ ಸದ್ದಿನ ಆರ್ಭಟ ಕೇಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.