ADVERTISEMENT

ಪಶ್ಚಿಮಕ್ಕೆ ಕಾಂಗ್ರೆಸ್ ಟಿಕೆಟ್‌ಗೆ ಹಕ್ಕೊತ್ತಾಯ

ಜಿಲ್ಲೆಯ ಕೆಲ ಮುಖಂಡರಿಂದ ವರಿಷ್ಠರಿಗೆ ಪತ್ರ; ಮಠಾಧೀಶರಿಂದಲೂ ಬೆಂಬಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಅಕ್ಟೋಬರ್ 2018, 9:31 IST
Last Updated 7 ಅಕ್ಟೋಬರ್ 2018, 9:31 IST
   

ಹೊಸಪೇಟೆ: ನ. 3ರಂದು ನಡೆಯಲಿರುವ ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಹಕ್ಕೊತ್ತಾಯ ಬಲವಾಗಿ ಕೇಳಿ ಬಂದಿದೆ.

ಈ ಕುರಿತು ಜಿಲ್ಲೆಯ ಕೆಲ ಮುಖಂಡರು ಇತ್ತೀಚೆಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿದರೆ, ಕೆಲವರು ವರಿಷ್ಠರಿಗೆ ಪತ್ರ ಬರೆದು ಪಶ್ಚಿಮ ಭಾಗಕ್ಕೆ ಆದ್ಯತೆ ಕೊಡಬೇಕೆಂದು ಕೇಳಿದ್ದಾರೆ.

ಇದುವರೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಡೂರು ಹಾಗೂ ಬಳ್ಳಾರಿ ತಾಲ್ಲೂಕಿನವರಿಗೆ ಆದ್ಯತೆ ಕೊಡಲಾಗಿದೆ. ಈ ಸಲ ಪಶ್ಚಿಮ ಭಾಗದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಮುಖಂಡರು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಳ್ಳಾರಿಯ ಡಾ. ನಾಸೀರ್‌ ಹುಸೇನ್‌ ಅವರನ್ನು ಕಣಕ್ಕಿಳಿಸಿ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳಿಸಲಾಗಿದೆ. ಈ ಚುನಾವಣೆಯಲ್ಲಿ ಜಿಲ್ಲೆಯ ಪಶ್ಚಿಮ ಭಾಗದ ಮುಖಂಡರನ್ನು ಗುರುತಿಸಿ, ಟಿಕೆಟ್‌ ನೀಡಬೇಕೆಂದು ವಾದ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಘಟಕ, ಕಾರ್ಮಿಕ ವಿಭಾಗ, ತಾಲ್ಲೂಕು ಯುವ ಕಾಂಗ್ರೆಸ್‌ ಘಟಕ ಇದಕ್ಕೆ ಬೆಂಬಲ ಸೂಚಿಸಿರುವುದು ವಿಶೇಷ. ಈ ವಿಷಯವನ್ನು ಕಾಂಗ್ರೆಸ್‌ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಂಬಗಲ್‌ ರಾಮಕೃಷ್ಣ ದೃಢಪಡಿಸಿದರು.

‘ಇದುವರೆಗೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಪಶ್ಚಿಮ ಭಾಗದವರಿಗೆ ಆದ್ಯತೆ ಸಿಕ್ಕಿಲ್ಲ. ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅವಕಾಶ ಕೊಡಬೇಕೆಂದು ವರಿಷ್ಠರಿಗೆ ಕೇಳಿದ್ದೇವೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ರಾಮಕೃಷ್ಣ ತಿಳಿಸಿದರು.

‘ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ತಾಲ್ಲೂಕುಗಳು ಭೌಗೋಳಿಕವಾಗಿ ದೂರದಲ್ಲಿರುವ ಕಾರಣ ಅಭಿವೃದ್ಧಿಯಿಂದ ವಂಚಿತವಾಗಿವೆ. ಈ ಭಾಗದವರಿಗೆ ಟಿಕೆಟ್‌ ನೀಡಿದರೆ ಕಡೆಗಣನೆಗೆ ಒಳಗಾಗಿರುವ ಪ್ರದೇಶಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಪೈಕಿ ಕಂಪ್ಲಿಯ ಜೆ.ಎನ್‌. ಗಣೇಶ, ಹಗರಿಬೊಮ್ಮನಹಳ್ಳಿಯ ಭೀಮಾ ನಾಯ್ಕ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್‌ ಹೊಸಪೇಟೆಯವರು. ಹೂವಿನಹಡಗಲಿಯಿಂದ ಗೆದ್ದಿರುವ ಪಿ.ಟಿ. ಪರಮೇಶ್ವರ ನಾಯ್ಕ ಕೂಡ ಪಶ್ಚಿಮ ಭಾಗದ ಶಾಸಕರು. ಆರರಲ್ಲಿ ನಾಲ್ಕು ಕ್ಷೇತ್ರಗಳು ಪಶ್ಚಿಮ ಭಾಗದ ವ್ಯಾಪ್ತಿಗೆ ಬರುತ್ತವೆ. ಒಂದುವೇಳೆ ಈ ಭಾಗದವರಿಗೆ ಟಿಕೆಟ್‌ ನೀಡಿದರೆ ಚುನಾವಣೆಯಲ್ಲಿ ಇನ್ನಷ್ಟು ಅನುಕೂಲವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಗುಜ್ಜಲ್‌ ನಾಗರಾಜ್‌ ಪರ ಬ್ಯಾಟಿಂಗ್‌:ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜಲ್‌ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಕೆಲ ಮುಖಂಡರು ಆಗ್ರಹಿಸಿದ್ದಾರೆ.

‘ಗುಜ್ಜಲ್‌ ನಾಗರಾಜ ಅವರು ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರಿಗೆ ಟಿಕೆಟ್‌ ಕೊಡಬೇಕು. ಮೇಲಿಂದ ಅವರು ಪಶ್ಚಿಮ ಭಾಗದ ಹೊಸಪೇಟೆ ತಾಲ್ಲೂಕಿನವರು’ ಎಂದು ಮುಖಂಡರಾದ ನಂದಿಹಳ್ಳಿ ಹಾಲಪ್ಪ, ಕೆ.ಎಸ್‌.ಎಲ್‌.ಸ್ವಾಮಿ, ನಿಂಬಗಲ್‌ ರಾಮಕೃಷ್ಣ, ಫಹೀಮ್‌ ಬಾಷಾ ಅವರು ವರಿಷ್ಠರಿಗೆ ತಿಳಿಸಿದ್ದಾರೆ.

‘ಕೆಲ ಮಠಾಧೀಶರು ಗುಜ್ಜಲ್‌ ನಾಗರಾಜ ಪರ ವಕಾಲತ್ತು ಮಾಡಿದ್ದಾರೆ’ ಎಂದು ರಾಮಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.