
ಸಿರುಗುಪ್ಪ: ತಾಲ್ಲೂಕಿನಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಅಂಗಡಿಗಳ ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರೈತರು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಹಾಜಿಸಾಬ್ ಮಾತನಾಡಿ, ತಾಲ್ಲೂಕಿನಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ರಸೀದಿ ನೀಡುತ್ತಿಲ್ಲ. ಕೇವಲ ಬಿಳಿ ಚೀಟಿಯ ಮೇಲೆ ಬರೆದುಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಮ್ಮ ಹತ್ತಿರ ರಸಗೊಬ್ಬರ ಇಲ್ಲವೆಂದು ಹೇಳುತ್ತಾರೆ.
ಒಂದು ಚೀಲ ಯೂರಿಯಾ ಗೊಬ್ಬರ ಬೇಕೆಂದು ಸಣ್ಣ ರೈತರು ಕೇಳಿದರೆ ಒಂದು ಚೀಲ ಕೊಡುವುದಿಲ್ಲ, ಅದರ ಜೊತೆಗೆ ಯಾವುದೇ ಉಪ ಗೊಬ್ಬರವನ್ನು ತೆಗೆದುಕೊಂಡರೆ ಮಾತ್ರ ಕೊಡುತ್ತೇವೆ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ಇದರಿಂದಾಗಿ ಸಣ್ಣ ರೈತರಿಗೆ ಯೂರಿಯಾ ಸಿಗುತ್ತಿಲ್ಲ, ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ರೈತರಿಗೆ ಸರಿಯಾದ ಬೆಲೆಯಲ್ಲಿ ರಸಗೊಬ್ಬರ ಹಾಗೂ ಕ್ರಿಮಿನಾಶಗಳನ್ನು ದೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು.
ರೈತರಾದ ವೆಂಕಟೇಶ, ಗಾದಿಲಿಂಗಪ್ಪ, ಸಂಜೀವರೆಡ್ಡಿ, ರಾಮು ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.