ADVERTISEMENT

ಹಿಂದುಳಿದ ಜಾತಿಗಳಿಗೆ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 12:46 IST
Last Updated 5 ಏಪ್ರಿಲ್ 2022, 12:46 IST
ವಿಜಯನಗರ ಜಿಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟ, ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಟ್ರಸ್ಟ್‌ ಕಾರ್ಯಕರ್ತರು ಮಂಗಳವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು
ವಿಜಯನಗರ ಜಿಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟ, ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಟ್ರಸ್ಟ್‌ ಕಾರ್ಯಕರ್ತರು ಮಂಗಳವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಸ್ಥಳೀಯ ಸಂಸ್ಥೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ವಿಜಯನಗರ ಜಿಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟ, ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಟ್ರಸ್ಟ್‌ ಆಗ್ರಹಿಸಿದೆ.

ಈ ಸಂಬಂಧ ಎರಡೂ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹಕ್ಕೊತ್ತಾಯ ಮಾಡಿದರು.

ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್‍ ಮಾತನಾಡಿ, ‘ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾಯಿತ ಸಮಿತಿಯಲ್ಲಿ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ನಿಟ್ಟಿನಲ್ಲಿ ಆಯೋಗ ರಚನೆಗೆ ತೀರ್ಮಾನಿಸಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಅನೇಕ ಅಸಂಘಟಿತ ಹಿಂದುಳಿದ ಜಾತಿಗಳು ಸಮಾನ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ’ ಎಂದರು.

ADVERTISEMENT

ಅವಕಾಶ ವಂಚಿತ ಹಿಂದುಳಿದ ಜಾತಿಗಳಿಗೆ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ನಿಖರವಾದ ಅಂಕಿ ಅಂಶಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ನಂತರ ಮೀಸಲಾತಿ ನೀಡಬಹುದೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈಗಾಗಲೇ ರಾಜ್ಯದಲ್ಲಿ 2015ರ ಏಪ್ರಿಲ್‌ನಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ನ್ಯಾಯಮೂರ್ತಿ ಕಾಂತರಾಜ್ ಅವರ ಅಧ್ಯಕ್ಷತೆಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ಜಾತಿಗಳು ಹೊಂದಿರುವ ರಾಜಕೀಯ ಪ್ರಾತಿನಿಧ್ಯಗಳ ಅಂಕಿ ಅಂಶಗಳನ್ನು ಸಂಗ್ರಹಿಸಿದೆ. ಅದನ್ನು ಮಾನದಂಡವಾಗಿ ಇಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ 6 ತಿಂಗಳೊಳಗಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ರವಿಶಂಕರ್‌ ದೇವರಮನೆ, ಎಚ್.ತಿಪ್ಪೇಸ್ವಾಮಿ, ಎಂ.ಕೆ.ಹನುಮಂತಪ್ಪ, ಕೆ.ಅಂಜಿನಪ್ಪ, ಜಿ.ಸೋಮಣ್ಣ, ಗೌಳಿ ಸಣ್ಣೆಪ್ಪ, ಮಧುಸೂದನ್, ಎಂ.ಜಿ.ಮನೋಹರ, ಬಿ.ಗೌಡಣ್ಣನವರ್, ಕೆ.ಶಿವಮೂರ್ತಿ, ನಾಗರಾಜ್, ಡಿ.ಪಂಪಾಪತಿ, ಸಣ್ಣ ಮಾರೆಪ್ಪ, ವಿ.ರಾಮುಡು, ವೀರಣ್ಣ, ಕೆ.ಶ್ರೀನಿವಾಸ್, ತಿಮ್ಮಪ್ಪ ಯಾದವ್, ಮೊಹಮ್ಮದ್‍ ಬಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.