ADVERTISEMENT

ಕಂಪ್ಲಿ | ಒಂಟಿ ಮಹಿಳೆಯರ ಪುನರ್ವಸತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 4:23 IST
Last Updated 25 ಫೆಬ್ರುವರಿ 2026, 4:23 IST
ಕಂಪ್ಲಿ ತಾಲ್ಲೂಕು ರಾಜ್ಯ ಒಂಟಿ ಮಹಿಳೆಯರ ಸಂಕರಕ್ಷಣಾ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಕಂಪ್ಲಿ ತಾಲ್ಲೂಕು ರಾಜ್ಯ ಒಂಟಿ ಮಹಿಳೆಯರ ಸಂಕರಕ್ಷಣಾ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಕಂಪ್ಲಿ: ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ರಾಜ್ಯ ಒಂಟಿ ಮಹಿಳೆಯರ  ಸಂಕರಕ್ಷಣಾ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಬಳಿಕ ರಾಜ್ಯ ಒಂಟಿ ಮಹಿಳೆಯರ ಸಂಕರಕ್ಷಣಾ ಸಂಘ ತಾಲ್ಲೂಕು ಘಟಕದ ಸಂಚಾಲಕ ಎ. ಸ್ವಾಮಿ ಮಾತನಾಡಿ, ವಿಮುಕ್ತ ದೇವದಾಸಿಯೇತರ ಒಂಟಿ ಮಹಿಳೆಯರ ಗಣತಿ ಮಾಡಿ ಪುನರ್ವಸತಿ ಕಲ್ಪಿಸಬೇಕು. ಮಾಸಿಕ ಕನಿಷ್ಠ ಪಿಂಚಣಿ ₹ 6,000 ನೀಡಬೇಕು. ಒಂಟಿ ಮಹಿಳೆಯರು, ಪತಿ ತ್ಯಜಿಸಿದ, ಯುವ ವಿಧವೆ, 50ವರ್ಷದೊಳಗಿನ ಮಹಿಳೆಯರ ಸಾಮಾಜಿಕ ಬಹಿಷ್ಕಾರ ಪರಿಹಾರವಾಗಿ ₹ 10ಲಕ್ಷ ಇಡುಗಂಟು ಸರ್ಕಾರ ಘೋಷಿಸಬೇಕು. ಬಹಿಷ್ಕೃತ  ವಿದ್ಯಾವಂತ ಮಹಿಳೆಗೆ ಉದ್ಯೋಗ ಇಲ್ಲವೇ ನಿರುದ್ಯೋಗ ಭತ್ಯೆ ಮಾಸಿಕ ₹ 10,000 ನೀಡಬೇಕು. ದೌರ್ಜನ್ಯಕ್ಕೊಳಗಾದ ಗರ್ಭಿಣಿ, ಬಾಣಂತಿ ಒಂಟಿ ಮಹಿಳೆಯರಿಗೆ 18ತಿಂಗಳ ಕಾಲ ಮಾಸಿಕ ₹ 10,000 ಪರಿಹಾರ, ವೈದ್ಯಕೀಯ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

ಒಂಟಿ ಮಹಿಳೆಯರ ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ ರೂಪಿಸಬೇಕು. ಮಹಿಳಾ ಉದ್ಯೋಗ, ರಾಜಕೀಯ ಮೀಸಲಾತಿಯಲ್ಲಿ ಒಂಟಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ರಾಜ್ಯ ಬಜೆಟ್‍ನಲ್ಲಿ ಸೂಕ್ತ ಅನುದಾನ ಒದಗಿಸಿ ಇದರಲ್ಲಿ ಶೇ 33ರಷ್ಟು ಹಣವನ್ನು ಒಂಟಿ ಮಹಿಳೆಯರ ಪುನರ್ವಸತಿಗೆ ಮೀಸಲಿರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಪದಾಧಿಕಾರಿಗಳಾದ ಅಂಬಮ್ಮ, ದುರುಗಮ್ಮ, ಕಮಲಮ್ಮ, ಜ್ಯೋತಿ, ಪಾರ್ವತಿ, ಕೊಲ್ಲಮ್ಮ, ಮಾರಮ್ಮ, ಹನುಮಂತಮ್ಮ, ಪುಷ್ಪಾವತಿ, ಕವಿತಾ, ಲಕ್ಷ್ಮಿ, ಮಸ್ತಾನಮ್ಮ, ರುದ್ರಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.