ADVERTISEMENT

ನಾಗೇನಹಳ್ಳಿ, ಬೆನಕಾಪುರಕ್ಕೆ ಬಸ್‌ ಓಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 8:16 IST
Last Updated 5 ಫೆಬ್ರುವರಿ 2021, 8:16 IST
ಎಐಡಿವೈಒ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು
ಎಐಡಿವೈಒ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ತಾಲ್ಲೂಕಿನ ನಾಗೇನಹಳ್ಳಿ ಹಾಗೂ ಬೆನಕಾಪುರ ಗ್ರಾಮಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ಗಳನ್ನು ಓಡಿಸಬೇಕೆಂದು ಆಗ್ರಹಿಸಿ ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ (ಎಐಡಿವೈಒ) ಕಾರ್ಯಕರ್ತರು ಶುಕ್ರವಾರ ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಎರಡೂ ಗ್ರಾಮಗಳಿಗೆ ಅನೇಕ ವರ್ಷಗಳ ಹಿಂದೆಯೇ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೇರೆಡೆ ಬಸ್‌ ಸಂಚಾರ ಶುರುವಾದರೂ ಈ ಗ್ರಾಮಗಳಿಗೆ ಆರಂಭವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಎರಡೂ ಗ್ರಾಮಗಳಿಗೆ ಬಸ್‌ ಓಡಿಸಬೇಕು ಎಂದು ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಎರಡೂ ಗ್ರಾಮಗಳು ಹತ್ತು ಕಿ.ಮೀ. ಅಂತರದೊಳಗೆ ಇವೆ. ಈ ಹಿಂದಿನಂತೆ ನಗರ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಬಸ್‌ ಓಡಿಸಿದರೆ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ. ಆನ್‌ಲೈನ್‌ ಬಸ್‌ ಪಾಸ್‌ ವಿತರಣಾ ವ್ಯವಸ್ಥೆ ಹಿಂಪಡೆದು, ಈ ಮೊದಲಿನಂತೆ ಬಸ್‌ ನಿಲ್ದಾಣದಲ್ಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಎಐಡಿವೈಒ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಎಚ್‌. ಎರ್ರಿಸ್ವಾಮಿ, ಸಂಘಟಕ ಕೆ. ಹುಲುಗಪ್ಪ, ಜಿಲ್ಲಾ ಸಮಿತಿ ಸದಸ್ಯ ಗೌಸ್‌, ತಾಲ್ಲೂಕು ಸಮಿತಿ ಸದಸ್ಯರಾದ ಹುಸೇನ್‌ ಬಾಷಾ, ವಿದ್ಯಾರ್ಥಿಗಳಾದ ಸ್ವಾತಿ, ಹೇಮಾ, ಶ್ವೇತಾ, ರಜಿಯಾ, ರಿಯಾಜ್, ರಮೇಶ್, ಶಿವು, ಮೈಲಾರಿ, ಸಂದೀಪ್, ದಿಲೀಪ್, ಮಾರುತಿ, ಬಿ. ರಮೇಶ್, ಇನಾಯತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.