ಬಳ್ಳಾರಿ: ‘ಒಣಮೆಣಸಿನಕಾಯಿಯನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಬೇಕು, ಕೂಡಲೇ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಬೇಕು’ ಎಂದು ರೈತ ಸಂಘಟನೆ ಎಐಕೆಕೆಎಂಎಸ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘಟನೆಯ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕಾಂ. ಗೋವಿಂದ, ‘ಈ ವರ್ಷ ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಒಂದು ಎಕರೆಗೆ ಅಂದಾಜು ₹2 ಲಕ್ಷದ ವರೆಗೆ ಖರ್ಚು ಮಾಡಿದ್ದಾರೆ. ಮಳೆ ಜಾಸ್ತಿಯಾಗಿ ಕಪ್ಪು ಮಚ್ಚೆ ರೋಗ ತಗುಲಿದೆ. ಸದ್ಯದ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಣಸಿನಕಾಯಿಗೆ ₹8 ಸಾವಿರದಿಂದ ₹11 ಸಾವಿರ ದರ ಸಿಗುತ್ತಿದೆ. ಐದು ವರ್ಷಗಳಿಂದ ಮೆಣಸಿನಕಾಯಿಗೆ ಬೆಲೆ ಸಿಗುತ್ತಿಲ್ಲ. ಬಳ್ಳಾರಿ ಜಿಲ್ಲೆಯ ರೈತರು ನಷ್ಟಕ್ಕೀಡಾಗಿದ್ದಾರೆ’ ಎಂದರು.
‘ಸರ್ಕಾರವೇ ರೈತರನ್ನು ಕಾಪಾಡಬೇಕು. ಮೆಣಸಿನಕಾಯಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಪ್ರಾರಂಭಿಸಬೇಕು. ‘5531’ ವಿಧದ ಮೆಣಸಿನಕಾಯಿಗೆ ಒಂದು ಕ್ವಿಂಟಲ್‌ಗೆ ₹25,000, ‘ಬ್ಯಾಡಗಿ 2043’ ವಿಧದ ಮೆಣಸಿನಕಾಯಿಗೆ ₹50,000 ಬೆಂಬಲ ಬೆಲೆ ನೀಡಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ, ‘ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಇಲ್ಲಿಯ ಬಹುತೇಕ ಮೆಣಸಿನಕಾಯಿ ಬ್ಯಾಡಗಿಯ ಮಾರುಕಟ್ಟೆಗೆ ಹೋಗಿ ಮಾರಾಟವಾಗುತ್ತಿದೆ. ಇದರಿಂದ ಪ್ರಯಾಣದ ವೆಚ್ಚವೂ ಸೇರಿ ನಷ್ಟವಾಗುತ್ತಿದೆ ಇಲ್ಲಿಯೇ ಮಾರುಕಟ್ಟೆ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
‘ಈ ಎಲ್ಲ ವಿಷಯಗಳನ್ನು ಮುಂದಿಟ್ಟು ಎಐಕೆಕೆಂಎಸ್ ಬಳ್ಳಾರಿ ಜಿಲ್ಲಾ ಸಮಿತಿಯು ಜ.30ರಂದು ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಳ್ಳಾರಿ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.