ADVERTISEMENT

ಮೋಟಾರ್‌ ವಾಹನ ಕಾಯ್ದೆ ಹಿಂಪಡೆಯಿರಿ

ಆಟೊ ಚಾಲಕರು, ಅಸಂಘಟಿತ ಕಾರ್ಮಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 12:30 IST
Last Updated 25 ಸೆಪ್ಟೆಂಬರ್ 2019, 12:30 IST
ಆಟೊ ಚಾಲಕರು ಬುಧವಾರ ಹೊಸಪೇಟೆಯ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಆಟೊ ಚಾಲಕರು ಬುಧವಾರ ಹೊಸಪೇಟೆಯ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿ ಫೆಡರೇಶನ್‌ ಆಫ್‌ ಕರ್ನಾಟಕ ಆಟೊರಿಕ್ಷಾ ಡ್ರೈವರ್ಸ್‌ ಯೂನಿಯನ್‌ನವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಫೆಡರೇಶನ್‌ ಕಚೇರಿಯಿಂದ ಆರಂಭಗೊಂಡ ರ್‍ಯಾಲಿ ಪ್ರಮುಖ ಮಾರ್ಗಗಳ ಮೂಲಕ ತಹಶೀಲ್ದಾರ್‌ ಕಚೇರಿ ತಲುಪಿತು. ಅಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಫೆಡರೇಶನ್‌ ಅಧ್ಯಕ್ಷ ಕೆ.ಎಂ. ಸಂತೋಷ್‌ ಕುಮಾರ್‌, ‘ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಜನ ಆಟೊ ಸೇರಿದಂತೆ ಇತರೆ ಬಾಡಿಗೆ ವಾಹನಗಳನ್ನು ಓಡಿಸಿ ಕುಟುಂಬ ನಡೆಸುತ್ತಿದ್ದಾರೆ. ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆಯಿಂದ ದಂಡದ ಮೊತ್ತ ಅಧಿಕವಾಗಿದ್ದು, ಅವರ ಮೇಲೆ ಹೆಚ್ಚಿನ ಹೊರೆ ಹಾಕಿದಂತಾಗಿದೆ’ ಎಂದರು.

ADVERTISEMENT

‘ಸಾರಿಗೆ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಹುನ್ನಾರದಿಂದ ಕೇಂದ್ರ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ಮಾಡಿ ಜನರನ್ನು ವಂಚಿಸಲು ಮುಂದಾಗಿದೆ. ವಿಮೆ, ಆಟೊಮೊಬೈಲ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಕಾಯ್ದೆ ಮುಂದುವರೆದರೆ ಆಟೊಮೊಬೈಲ್‌ ಕ್ಷೇತ್ರದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿರುವವರು ಬೀದಿಗೆ ಬರಬೇಕಾಗುತ್ತದೆ. ಹಾಗಾಗಿ ಕೂಡಲೇ ಕಾಯ್ದೆಯನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಅಸಂಘಟಿತ ಭದ್ರತಾ ಮಂಡಳಿಯಲ್ಲಿ ಆಟೊ ಚಾಲಕರಿಗೆ ಸಾಲ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಎಲ್ಲಾ ಆಟೊ ನಿಲ್ದಾಣಗಳನ್ನು ಆಧುನೀಕರಣಗೊಳಿಸಬೇಕು. ಅವೈಜ್ಞಾನಿಕವಾಗಿ ಹಣ ವಸೂಲಿ ಮಾಡುತ್ತಿರುವ ಗ್ಯಾಸ್‌ ಕಂಪನಿಯ ಬ್ಯಾಂಕುಗಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಜಿ. ಸಿದ್ದಲಿಂಗೇಶ್‌, ಎಸ್‌. ಅನಂತಶಯನ, ಮರಡಿ ಜಂಬಯ್ಯ ನಾಯಕ, ಆರ್‌. ಭಾಸ್ಕರ್‌ ರೆಡ್ಡಿ, ಆಟೊ ಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.