ಪ್ರಾತಿನಿಧಿಕ ಚಿತ್ರ
ಬಳ್ಳಾರಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತೀಚೆಗೆ ಸಂಡೂರು ತಾಲ್ಲೂಕಿನಲ್ಲಿ ಒಟ್ಟು ಏಳು ಅದಿರು ಬ್ಲಾಕ್‌ಗಳನ್ನು ಹರಾಜು ಹಾಕಿದೆ. ಇದರಲ್ಲಿ ಒಂದು ಬ್ಲಾಕ್ ದಟ್ಟಾರಣ್ಯವಾಗಿದ್ದು (ವರ್ಜಿನ್ ಅರಣ್ಯ), ಹರಾಜಿಗೂ ಮುನ್ನ ಅರಣ್ಯ ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ.
ಸಂಡೂರಿನ ಅರಣ್ಯ ಪ್ರದೇಶದ ದಕ್ಷಿಣ ವಲಯದಲ್ಲಿರುವ ದಟ್ಟಾರಣ್ಯದ ಒಟ್ಟು 217.453 ಎಕರೆ ವ್ಯಾಪ್ತಿಯ ‘ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ’ ಹೆಸರಿನ ಅದಿರು ಬ್ಲಾಕ್ ಅನ್ನು ಇತ್ತೀಚೆಗೆ ನಡೆದ ಹರಾಜಿನಲ್ಲಿ ಆರ್‌ಬಿಎಸ್‌ಎಸ್‌ಎನ್ ಸಂಸ್ಥೆ ಅತ್ಯಧಿಕ ಪ್ರೀಮಿಯಂ (ಶೇಕಡ 200) ನೀಡಿ ಖರೀದಿ ಮಾಡಿದೆ.
‘ವರ್ಜಿನ್ ಕಾಡಿನಲ್ಲಿ ಬ್ಲಾಕ್ ಗುರುತು ಮಾಡಲಾಗಿದೆ. ಹರಾಜನ್ನೂ ಮಾಡಲಾಗಿದೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅರಣ್ಯ ಇಲಾಖೆಯ ಅಭಿಪ್ರಾಯವನ್ನೂ ಕೇಳಿಲ್ಲ’ ಎಂದು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಣಿ ಇಲಾಖೆಯ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ವರ್ಜಿನ್ ಕಾಡಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬುದು ಇಲಾಖೆಯ ನಿಲುವು. ಈ ಕಾರಣಕ್ಕೆ ಹಲವು ಪ್ರಸ್ತಾವ ತಿರಸ್ಕೃತವಾಗಿವೆ. ಹೀಗಿರುವಾಗ ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಒಮ್ಮೆಯಾದರೂ ಕೇಳಬೇಕಾಗಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಭೆಯಲ್ಲೂ ಚರ್ಚಿಸಿಲ್ಲ: ಸಂಡೂರಿನ ಅರಣ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ, ಗುತ್ತಿಗೆ ಅವಧಿ ಮೀರಿದ್ದ ವಿವಿಧ ಗಣಿಗಳನ್ನು ಸಂಯೋಜಿಸಿ ಬ್ಲಾಕ್‌ಗಳನ್ನು ಸಿದ್ಧಪಡಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 2024ರ ಅಕ್ಟೋಬರ್ 3ರಂದು ಅಧಿಸೂಚನೆ ಹೊರಡಿಸಿತ್ತು. ಹರಾಜು ಹಾಕಲಿದ್ದ ಈ ಬ್ಲಾಕ್‌ಗಳಿಗೆ ಅರಣ್ಯ ತೀರುವಳಿ ಪತ್ರ ನೀಡುವುದರ ಕುರಿತು 2024ರ ಅಕ್ಟೋಬರ್ 16ರಂದು ಅರಣ್ಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಒಟ್ಟು ಒಂಬತ್ತು ಬ್ಲಾಕ್‌ಗಳ ಕುರಿತು ಪ್ರಸ್ತಾಪಿಸಲಾಗಿತ್ತಾದರೂ ಎಂಟು ಬ್ಲಾಕ್‌ಗಳ ಬಗ್ಗೆ ಮಾತ್ರ ಸಮಾಲೋಚನೆ ನಡೆಸಲಾಗಿತ್ತು. ವರ್ಜಿನ್ ಅರಣ್ಯ ವ್ಯಾಪ್ತಿಯ ‘ಕುಮಾರಸ್ವಾಮಿ ಐರನ್ ಓರ್’ ಬ್ಲಾಕ್ ಬಗ್ಗೆ ಈ ಸಭೆಯಲ್ಲಿ ಯಾವುದೇ ಮಾತುಕತೆ ನಡೆದಿರಲಿಲ್ಲ ಎಂಬುದು ಸಭಾ ನಡಾವಳಿಗಳಿಂದ ಗೊತ್ತಾಗಿದೆ.
ಈ ಎಲ್ಲದರ ಕುರಿತು ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ, ‘ಬ್ಲಾಕ್ ರಚನೆಯು ಕೇಂದ್ರ ಕಚೇರಿಯ ನಿರ್ಧಾರ’ ಎಂದಷ್ಟೇ ಹೇಳಿದರು. ಇನ್ನೊಂದೆಡೆ, ಪರಿಸರ ಸೂಕ್ಷ್ಮ ಪ್ರದೇಶವನ್ನು ಗಣಿಗಾರಿಕೆಗೆ ನೀಡುವು ದಕ್ಕೆ ಪರಿಸರ ಪ್ರೇಮಿಗಳು, ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹರಾಜಾದ ಗಣಿಗಳು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಜಂಬುನಾಥ, ವಿಭೂತಿಗುಡ್ಡ, ಕರಡಿಕೊಳ್ಳ, ಉತ್ತರ ರಾಜಾಪುರ, ದಕ್ಷಿಣ ರಾಜಾಪುರ, ಶಾಂತಿಪ್ರಿಯ, ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿಗಳು ಹರಾಜುಗೊಂಡಿವೆ. ಇದರ ಜತೆಗೆ, ವಿಜಯನಗರ ಜಿಲ್ಲೆಯ ಕಾರಿಗನೂರು, ಚಿತ್ರದುರ್ಗದ ಜಂತಕಲ್, ತಮಕೂರಿನ ಜಾಣೇಹಾರ ಕಬ್ಬಿಣದ ಅದಿರು ಗಣಿಗಳನ್ನೂ ಹರಾಜು ಹಾಕಲಾಗಿದೆ.
ಹೊಸ ಬ್ಲಾಕ್ ಹರಾಜಾಗಿದ್ದರೂ ಗಣಿ ಆರಂಭಿಸಬೇಕಿದ್ದರೆ ಇಲಾಖೆಯ ಅನುಮತಿ ಪಡೆಯಬೇಕು. ಆಗ ಪರಿಶೀಲನೆ ಮಾಡುತ್ತೇವೆ.–ಸಂದೀಪ್ ಸೂರ್ಯವಂಶಿ, ಡಿಸಿಎಫ್, ಬಳ್ಳಾರಿ
ವರ್ಜಿನ್ ಅರಣ್ಯ ಎಂಬುದು ಮಾನವ ಸೃಷ್ಟಿಸಲು ಸಾಧ್ಯವೇ ಆಗಲಾರದ್ದು. ಇಂಥ ಪ್ರದೇಶದಲ್ಲಿ ಗಣಿಗಾರಿಕೆ ಒಪ್ಪತಕ್ಕದ್ದಲ್ಲ. ಈಗಿರುವ ಹಳೆ ಗಣಿಗಳನ್ನೇ ಅದಿರು ಉತ್ಪಾದನೆಗೆ ಬಳಸಿಕೊಳ್ಳಬೇಕು. ಸಂಪತ್ತು ಮುಂದಿನ ಪೀಳಿಗೆಗೆ ಇರಬೇಕು.–ಎಸ್.ಆರ್ ಹಿರೇಮಠ, ಮುಖ್ಯಸ್ಥರು, ಸಮಾಜ ಪರಿವರ್ತನಾ ಸಮುದಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.