ಸಿರುಗುಪ್ಪ (ಬಳ್ಳಾರಿ): ಗಡಿ ಜಿಲ್ಲೆ ಬಳ್ಳಾರಿಗೆ ಹೊಂದಿಕೊಂಡಿರುವ ಕರ್ನೂಲು ಜಿಲ್ಲೆಯ ಹೊಳಗುಂದ ತಾಲ್ಲೂಕಿನ ದೇವರಗಟ್ಟ (ದೇವರಗಟ್ಟು) ಗ್ರಾಮದ ಮಾಳ ಮಲ್ಲೇಶ್ವರಸ್ವಾಮಿ ಬನ್ನಿ ಉತ್ಸವದ ವೇಳೆ ಗುರುವಾರ ತಡರಾತ್ರಿ ವಿವಿಧ ಗ್ರಾಮಸ್ಥರ ನಡುವೆ ದೊಣ್ಣೆಗಳಿಂದ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
‘ಆದೋನಿ ತಾಲ್ಲೂಕಿನ ಆಂಜನೇಯಲು (50), ಹರಕೇರಿ ಗ್ರಾಮದ ತಿಮ್ಮಪ್ಪ (40) ಮೃತರು. 100ಕ್ಕೂ ಹೆಚ್ಚು ಜನರಿಗೆ ಪೆಟ್ಟಾಗಿದೆ. 40 ಜನರಿಗೆ ತೀವ್ರ ಗಾಯಗಳಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ’ ಎಂದು ಆಲೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ರಾಜು ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ದೇವರಗಟ್ಟದಲ್ಲಿ ಮಲ್ಲೇಶ್ವರ ಸ್ವಾಮಿ ಮತ್ತು ಮಾಳಮ್ಮ ದೇವಿಯ ಕಲ್ಯಾಣೋತ್ಸವ ಮಧ್ಯರಾತ್ರಿ ಜರುಗಿತು. ರಾಜಬೀದಿಯಲ್ಲಿ ಚೈತ್ರಯಾತ್ರೆ ಆರಂಭವಾದಾಗ ದೇವರ ವಿಗ್ರಹಗಳನ್ನು ಒಯ್ಯಲು ವಿವಿಧ ಗ್ರಾಮಗಳ ಎರಡು ಗುಂಪುಗಳು ಪೈಪೋಟಿ ನಡೆಸಿದವು. ಈ ಪ್ರಕ್ರಿಯೆಯಲ್ಲಿ ಕೋಲುಗಳಿಂದ ಕಾದಾಟ ನಡೆಯಿತು.
ದೇವರಿಗಾಗಿ ಹೊಡೆದಾಡುವುದೇ ಆಚರಣೆ: ದೇವರಗಟ್ಟದಲ್ಲಿ ವಿಜಯದಶಮಿಯನ್ನು ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವವಾಗಿ ಆಚರಿಸಲಾಗುತ್ತದೆ. ಕಲ್ಯಾಣೋತ್ಸವದ ಬಳಿಕ ದೇವರ ವಿಗ್ರಹವನ್ನು ಪಾದಯಗಟ್ಟು, ರಾಕ್ಷಸಪಾದ, ಶಮಿವೃಕ್ಷ ಮತ್ತು ಉತ್ತುಬಸವನ ದೇವಾಲಯದ ಮೂಲಕ ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ.
‘ಮೆರವಣಿಗೆ ವೇಳೆ ಉತ್ಸವಮೂರ್ತಿಗಳನ್ನು ಗ್ರಾಮಕ್ಕೆ ಒಯ್ಯಲು ಗ್ರಾಮಸ್ಥರು ಯತ್ನಿಸುತ್ತಾರೆ. ದೊಣ್ಣೆಗಳಿಂದ ಹೊಡೆದಾಟ ತಾರಕಕ್ಕೇರುತ್ತದೆ. ಒಂದು ಗುಂಪಿನಲ್ಲಿ ನೇರಣಿಕಿ, ನೇರಣಿಕಿತಾಂಡ, ಕೊತ್ತಪೇಟ ಗ್ರಾಮದವರು ಇದ್ದರೆ, ಮತ್ತೊಂದು ಗುಂಪಿನಲ್ಲಿ ಅರಿಕೇರ, ಸುಳುವಾಯಿ, ಎಳ್ಳಾರ್ತಿ, ಬಿಳೇಹಾಳ್, ನಿದ್ರವತ್ತಿ, ಆಲೂರು ಗ್ರಾಮದವರು ಇರುತ್ತಾರೆ. ಈ ಆಚರಣೆಯನ್ನು ಸ್ಥಳೀಯವಾಗಿ ‘ಬನ್ನಿ ಉತ್ಸವಂ’ ಅಥವಾ ‘ದೇವರಗಟ್ಟು ಕಟ್ಟಲ ಸಮರಂ’ ಎನ್ನುತ್ತಾರೆ. ಮಧ್ಯರಾತ್ರಿ 1ರಿಂದ 3ರವರೆಗೆ ದೊಣ್ಣೆಗಳ ಕಾಳಗ ನಡೆಯುತ್ತದೆ. ಇದನ್ನು ನೋಡಲು ಸಾವಿರಾರು ಜನರು ಬರುತ್ತಾರೆ’ ಎಂದು ಸ್ಥಳೀಯರು ತಿಳಿಸಿದರು.
ಇಂಥ ಆಚರಣೆ ನಡೆಯುತ್ತದೆ. ಸಾವು ಸಂಭವಿಸುತ್ತದೆ ಎಂಬುದು ಇಲ್ಲಿನ ಸರ್ಕಾರಕ್ಕೂ ಗೊತ್ತು. ಆದರೂ ನಿಷೇಧ ಹೇರಲಾಗಿಲ್ಲ ಎಂದು ಗ್ರಾಮಸ್ಥರೊಬ್ಬರು ದೂರಿದರು. ಆದರೆ, ಮುಂಜಾಗ್ರತೆಯಾಗಿ ಆಂಬುಲೆನ್ಸ್, ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು ಎಂದು ಮಾಹಿತಿ ನೀಡಿದರು.
ಈ ಸಲವೂ ಹಿಂಸೆ ತಡೆಗೆ 800 ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ, ಡ್ರೋನ್ ಬಳಸಲಾಗಿತ್ತು. ಮುನ್ನೆಚ್ಚರಿಕೆಗಳ ಹೊರತಾಗಿಯೂ ಅವಘಡ ಸಂಭವಿಸಿದೆ. ಕಳೆದ ವರ್ಷ ಮೂವರು ಮೃತಪಟ್ಟು, 70 ಮಂದಿಗೆ ಗಾಯವಾಗಿತ್ತು.
ರಸ್ತೆಯಲ್ಲಿ ದೇವರಿಟ್ಟು ಪ್ರತಿಭಟನೆ
ಉಳ್ಳಾಲ (ದಕ್ಷಿಣ ಕನ್ನಡ): ನವರಾತ್ರಿ ಶೋಭಾಯಾತ್ರೆಗೆ ಸ್ತಬ್ಧಚಿತ್ರಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕವನ್ನು ಗುರುವಾರ ತಡರಾತ್ರಿ ವೇಳೆ ಬಂದ್ ಮಾಡಿಸಿದ್ದ ಪೊಲೀಸರ ಜೊತೆಗೆ ಯುವಕರು ವಾಗ್ವಾದ ನಡೆಸಿದರು. ಅಲ್ಲದೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಭಕ್ತರು ತಡರಾತ್ರಿ ಸುಮಾರು ಎರಡೂವರೆ ಗಂಟೆ ಕಾಲ ಪೊಲೀಸ್ ಠಾಣೆ ಮುಂಭಾಗದಲ್ಲಿ ಕುಳಿತು ಪ್ರತಿಭಟಿಸಿದರು. ಸಾರ್ವಜನಿಕ ನವರಾತ್ರಿ ಶಾರದಾ ಉತ್ಸವ ಸಮಿತಿ 78ನೇ ವರ್ಷದ ಶಾರದೋತ್ಸವ ಆಯೋಜಿಸಿತ್ತು. ಮೆರವಣಿಗೆ ರಾತ್ರಿ 1ರ ವೇಳೆಗೆ ಅಬ್ಬಕ್ಕ ವೃತ್ತ ತಲುಪಿತು. ಆಗ ಧ್ವನಿವರ್ಧಕ ಸ್ಥಗಿತಕ್ಕೆ ಉಳ್ಳಾಲ ಪಿಎಸ್‌ಐ ಸೂಚಿಸಿದರು. ಆಗ ಕೆಲ ಯುವಕರು ಪೊಲೀಸರ ನಡುವೆ ವಾಗ್ವಾದ ನಡೆಯಿತು. ರಕ್ಷಿತ್ ಆಶಿಶ್ ಮತ್ತು ಅಶ್ವತ್ಥ್ ಹಾಗೂ ಕೆಲ ಪರಿಕರಗಳನ್ನು ವಶಕ್ಕೆ ಪಡೆದ ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಮಹಿಳೆಯರು ಸೇರಿದಂತೆ ಹಲವರು ಉಳ್ಳಾಲ ಪೊಲೀಸ್ ಠಾಣೆ ಮುಂದೆ ಸೇರಿ ಶಾರದಾ ವಿಗ್ರಹವನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದರು. ವಶಕ್ಕೆ ಪಡೆದುಕೊಂಡ ಮೂವರು ಯುವಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಬೇಡಿಕೆಗೆ ಒಪ್ಪದ ಉಳ್ಳಾಲ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಎಸಿಪಿ ವಿಜಯಕ್ರಾಂತಿ ಡಿಸಿಪಿ ಮಿಥುನ್ ಎಚ್.ಎನ್. ಭೇಟಿ ನೀಡಿ ಮನವೊಲಿಸಲು ಯತ್ನಿಸಿದರೂ ಸಫಲವಾಗಲಿಲ್ಲ. ಬಂಧಿತರ ಬಿಡುಗಡೆಗೆ ಪೊಲೀಸರು ಒಪ್ಪದೆ ಇದ್ದಾಗ ನೀವೇ ಮುಂದಿನ ಪರಿಣಾಮ ಎದುರಿಸಿರಿ ಎಂದು ಮುಖಂಡರು ಹೊರನಡೆದರು. ಪಟ್ಟುಬಿಡದ ಭಕ್ತರು ಪ್ರತಿಭಟನೆ ಮುಂದುವರಿಸಿದಾಗ ನಸುಕಿನ 4.30ರ ಸುಮಾರಿಗೆ ಆಶೀಶ್ ಅಶ್ವತ್ ಅವರನ್ನು ಬಿಡುಗಡೆಗೊಳಿಸಿದರು. ರಕ್ಷಿತ್ ವಿರುದ್ಧ ಪ್ರಕರಣಗಳಿದ್ದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅಂತಿಮವಾಗಿ ಬೆಳಿಗ್ಗೆ ವೇಳೆಗೆ ಶಾರದಾ ಮೂರ್ತಿಯ ವಿಸರ್ಜನೆ ನಡೆಯಿತು.
ಡಿವೈಎಸ್‌ಪಿ ಸೇರಿ ಇಬ್ಬರಿಗೆ ಗಾಯ
ಮಡಿಕೇರಿ: ದಸರಾ ದಶಮಂಟಪಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಶುಕ್ರವಾರ ಗಲಾಟೆಯಾಗಿದೆ. ತಳ್ಳಾಟದಲ್ಲಿ ಡಿವೈಎಸ್‌ಪಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಡ್‌ಕಾನ್‌ಸ್ಟೆಬಲ್ ಉದಯ್ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುಮಾನ ಘೋಷಣೆ ಆದಂತೆ ಕೆಲವರು ‘ಮೋಸ ಮೋಸ’ ಎಂದು ಕೂಗಿ ವೇದಿಕೆ ಏರಿದ್ದು ಪೀಠೋಪಕರಣ ಧ್ವಂಸಗೊಳಿಸಿದರು. ಈ ಹಂತದಲ್ಲಿ ಲಘು ಲಾಠಿ ಪ್ರಹಾರ ನಡೆಸಿದ್ದು ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಡಿವೈಎಸ್‌ಪಿ ಸೂರಜ್ ಅವರ ತಲೆ ಕಾಲಿಗೆ ತೀವ್ರ ಗಾಯಗಳಾಗಿವೆ. ಆರೋಪಿ ಯಕ್ಷಿತ್‌ನನ್ನು ಬಂಧಿಸಲಾಗಿದೆ. ವೇದಿಕೆ ಏರಿದ್ದ ಅಷ್ಟೂ ಜನರ ಮೇಲೆ ಪ್ರಕರಣ ದಾಖಲಿಸಲಾಗುವುದು’ ಎಂದು ಕೊಡಗು ಎಸ್‌ಪಿ ಕೆ.ರಾಮರಾಜನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಿಳಿಸಿದರು. ಗೋಣಿಕೊಪ್ಪಲಿನಲ್ಲೂ ಗುರುವಾರ ತಡರಾತ್ರಿ ಶೋಭಾಯಾತ್ರೆ ವೇಳೆ ಡಿ.ಜೆ ಬಳಕೆಗೆ ಅನುಮತಿಗೆ ಒತ್ತಾಯಿಸಿ ಸಂಘಟಕರು 2 ಗಂಟೆ ರಸ್ತೆಯಲ್ಲಿ ಧರಣಿ ನಡೆಸಿದ್ದರು. ಕುಣಿತಕ್ಕೆ ಕೊಡಗಿನ ವಾಲಗ ಬಳಸಲು ಪೊಲೀಸರು ಅನುಮತಿ ನೀಡಿದ ನಂತರ ಮೆರವಣಿಗೆ ಮುಂದುವರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.