ADVERTISEMENT

ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕುಸಿಯುವ ಭೀತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:18 IST
Last Updated 19 ಡಿಸೆಂಬರ್ 2025, 5:18 IST
ಕುರುಗೋಡಿನ ಬಿಸಿಎಂ ಇಲಾಖೆ ವಿದ್ಯಾರ್ಥಿ ನಿಲಯದ ಕಟ್ಟಡದ ಗೋಡೆ ಶಿಥಿಲಾವಸ್ಥೆಗೆ ತಲುಪಿದೆ
ಕುರುಗೋಡಿನ ಬಿಸಿಎಂ ಇಲಾಖೆ ವಿದ್ಯಾರ್ಥಿ ನಿಲಯದ ಕಟ್ಟಡದ ಗೋಡೆ ಶಿಥಿಲಾವಸ್ಥೆಗೆ ತಲುಪಿದೆ   

ಕುರುಗೋಡು: ಇಲ್ಲಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ಕುಸಿಯುವ ಹಂತ ತಲುಪಿದ್ದು, ವಿದ್ಯಾರ್ಥಿಗಳು ಭಯದಲ್ಲಿ ದಿನಗಳನ್ನು ಕಳೆಯುವಂತಾಗಿದೆ.

1977ರಲ್ಲಿ ಖಾಸಗಿ ಕಟ್ಟಡದಲ್ಲಿ 70 ವಿದ್ಯಾರ್ಥಿಗಳಿಂದ ಆರಂಭಗೊಂಡ ವಸತಿ ನಿಲಯಕ್ಕೆ 1982ರಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣಗೊಂಡು 43 ವರ್ಷ ಕಳೆದಿವೆ.

ಊಟದ ಹಾಲ್ ಮತ್ತು ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳ ಚಾವಣಿ ಸಿಮೆಂಟ್ ಕಳಚಿಬೀಳುತ್ತಿದೆ. ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಭಯದಲ್ಲಿಯೇ ಕಾಲಕಳೆಯಬೇಕಾಗಿದೆ. ಮಳೆ ಬಂದರೆ ವಸತಿ ನಿಲಯದ ಕಟ್ಟಡ ಸೋರುತ್ತದೆ. ಮಳೆ ನೀರಿನಲ್ಲಿಯೇ ವಿದ್ಯಾರ್ಥಿಗಳು ವಾಸಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ADVERTISEMENT

ವಸತಿ ನಿಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವರೆಗೆ ಒಟ್ಟು 70 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ. ನಾಲ್ಕು ಕೊಠಡಿಗಳಿವೆ. ಒಂದು ಕೊಠಡಿಯಲ್ಲಿ 15 ವಿದ್ಯಾರ್ಥಿಗಳು ವಾಸಿಸಲು ವ್ಯವಸ್ಥೆ ಮಾಡಿದೆ. ಉಳಿದ 10 ವಿದ್ಯಾರ್ಥಿಗಳು ಇರುವುದರಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೆಚ್ಚು ವಿದ್ಯಾರ್ಥಿಗಳು ಒಂದು ಕೊಠಡಿಯಲ್ಲಿ ವಾಸಮಾಡುವುದರಿಂದ ಏಕಾಗ್ರಕೆ ಕೊರತೆ ಕಾಡುತ್ತಿದ್ದು, ಓದಿಕೊಳ್ಳಲು ತೊಂದರೆಯಾಗುತ್ತಿದೆ.

ಐದು ಶೌಚಾಲಯ ಕೊಠಡಿ ಮತ್ತು 4 ಸ್ನಾನದ ಕೊಠಡಿಗಳಿದ್ದು, ನಿತ್ಯ ಬೆಳಿಗ್ಗೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕಡಿಮೆ ಸಾಮರ್ಥ್ಯದ ಸೋಲಾರ್ ವಾಟರ್ ಹೀಟರ್ ವ್ಯವಸ್ಥೆ ಇದ್ದರೂ ಮೊದಲು ಸ್ನಾನಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಬಿಸಿನೀರು ದೊರೆಯುತ್ತದೆ. ಉಳಿದವರಿಗೆ ತಣ್ಣಿರ ಸ್ನಾನ ಅನಿವಾರ್ಯ. ಸಮಸ್ಯೆಗಳಿದ್ದರೂ ಬಾಯಿಬಿಟ್ಟು ಹೇಳದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ.

ವಸತಿನಿಲಯದಲ್ಲಿ ಸಮಸ್ಯೆಗಳಿದ್ದರೂ ಗುಣಮಟ್ಟದ ಊಟ ಮತ್ತು ಇತರೇ ಸೌಲಭ್ಯ ದೊರೆಯುತ್ತಿದೆ. ಹೊಸಕಟ್ಟಡ ನಿರ್ಮಾಣಮಾಡುವ ಅಗತ್ಯವಿದೆ ಎನ್ನುತಾರೆ ಹೆಸರೇಳಲು ಇಚ್ಚಿಸದ ವಿದ್ಯಾರ್ಥಿ.

ಸಮಸ್ಯೆಗಳನ್ನೇ ಹಾಸಿಹೊದ್ದಿರುವ ವಿದ್ಯಾರ್ಥಿ ನಿಲಯಕ್ಕೆ ಕಾಲಕಲ್ಪದ ಅಗತ್ಯವಿದೆ.

ಕುರುಗೋಡಿನ ಬಿಸಿಎಂ ಇಲಾಖೆ ವಿದ್ಯಾರ್ಥಿ ನಿಲಯದ ಒಂದು ಚಿಕ್ಕ ಕೊಠಡಿಯಲ್ಲಿ 15 ವಿದ್ಯಾರ್ಥಿಗಳು ವಾಸಮಾಡಲು ವ್ಯವಸ್ಥೆ ಮಾಡಲಾಗಿದೆ
ಅನುದಾನಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾದರೆ ಅದೇ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು
ಜಲಾಲಪ್ಪ, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ
ವಸತಿನಿಲಯದ ಕಟ್ಟದ ಕೊರತೆ ಹೊರತುಪಡಿಸಿ ಉಳಿದೆಲ್ಲ ಸೌಲಭ್ಯಗಳಿವೆ. ಕಟ್ಟಡದ ದುಃಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ
ಪ್ರಕಾಶ್, ನಿಲಯಪಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.