ಬಳ್ಳಾರಿ: ‘ಡಿಜಿಟಲ್ ಸಾಕ್ಷರತೆ, ನವೀನ ಚಿಂತನೆ, ಜಾಗತಿಕ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿ 21ನೇ ಶತಮಾನದ ಅಗತ್ಯವಾಗಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವವು ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ನೆರವೇರಿತು. ವಿವಿಯ ಕುಲಾಧಿಪತಿಯೂ ಆದ ಥಾವರ್ ಚಂದ್ ಗೆಹಲೋಟ್ ಘಟಿಕೋತ್ಸವ ಭಾಷಣ ಮಾಡಿದರು.
‘ಆತ್ಮನಿರ್ಭರ ಭಾರತದ ಮೂಲಕ 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಯುವಕರು ಪ್ರತಿಭೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ನೀಡಬೇಕು. ಯುವಪೀಳಿಗೆ ಉದ್ಯೋಗಾಕಾಂಕ್ಷಿಗಳಾಗುವುದಕ್ಕೆ ಬದಲಾಗಿ ಉದ್ಯೋಗ ಸೃಷ್ಟಿವವರಾಗಬೇಕು’ ಎಂದು ಸಲಹೆ ನೀಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿರುವಂತೆ ‘ರಾಷ್ಟ್ರಗಳು ಶಿಕ್ಷಣ ಸಂಸ್ಥೆಗಳಿಂದ ಸೃಷ್ಟಿಯಾಗಿವೆ’ ಎಂಬ ಈ ಚಿಂತನೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ವಿಶ್ವವಿದ್ಯಾಲಯಗಳನ್ನು ಶ್ರೇಷ್ಠತೆ ಸಂಸ್ಥೆಗಳನ್ನಾಗಿಸುವುದು ನಮ್ಮ ಗುರಿಯಾಗಿರಬೇಕು ಎಂದು ಹೇಳಿದರು.
‘ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದ ಮಹನೀಯರು ಸಮಾಜ, ಜನರು ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮುಂದುವರಿಸಲಿ’ ಎಂದು ಆಶಿಸಿದರು.
ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್‌ನ ನಿರ್ದೇಶಕ ಪ್ರೊ.ಅವಿನಾಶ್ ಚಂದ್ರ ಪಾಂಡೆ ಮಾತನಾಡಿ, ‘ಘಟಿಕೋತ್ಸವವು ಕೇವಲ ಒಂದು ಸಮಾರಂಭವಲ್ಲ;ಇದು ಪ್ರತಿ ವಿದ್ಯಾರ್ಥಿಯ ಪರಿಶ್ರಮ, ಶಿಸ್ತಿನ ಜೀವನ ಮತ್ತು ನಿಶ್ಚಯ ಹಾದಿಯ ಫಲಶ್ರುತಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗಳು ಭವಿಷ್ಯದ ಪೀಳಿಗೆಗೆ ಪ್ರೇರಣೆಯಾಗಬೇಕು’ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವವಿದ್ಯಾಲಯದ ಕುಲಸಚಿವ ನಾಗರಾಜ.ಸಿ., ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರುಗಳು, ಸಂಯೋಜಕರುಗಳು, ವಿವಿಧ ಮಹಾವಿದ್ಯಾಲಯಗಳ ಪಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮುಂತಾದ ಗಣ್ಯರು ಹಾಜರಿದ್ದರು.
ಮೂವರಿಗೆ ಡಾಕ್ಟರೇಟ್: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇರ್ಫಾನ್ ರಜಾಕ್, ಡಾ.ವಸುಂಧರಾ ಭೂಪತಿ, ಬಾವಿಹಳ್ಳಿ ನಾಗನಗೌಡ ಸೇರಿ ಮೂರು ಮಹನೀಯರಿಗೆ ಗೌರವ ಡಾಕ್ಟರೇಟ್ ನೀಡಿ ರಾಜ್ಯಪಾಲರು ಗೌರವಿಸಿದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ವಿವಿಧ ವಿಭಾಗಗಳ ಒಟ್ಟು 59 ಸಂಶೋಧನಾರ್ಥಿಗಳು ಪಿಎಚ್‌ಡಿ ಪದವಿ ಪಡೆದರು.
ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ವಿದ್ಯಾರ್ಥಿಗಳು ಸೇರಿ ಒಟ್ಟು 155 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದರು.
ಚಿನ್ನದ ಪದಕ ಪಡೆದವರು: ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಹಂಸಾ.ಎನ್ 4 ಚಿನ್ನದ ಪದ, ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ರಾಜೇಶ್ವರಿ 3 ಚಿನ್ನದ ಪದಕ, ಭೌತಶಾಸ್ತ್ರ ವಿಭಾಗದ ಮನೋಜ್, ರಸಾಯನಶಾಸ್ತ್ರದ ಸುಹಾನ ತಸ್ಲೀಮ್, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಶಿಲ್ಪಾ, ಬಿಬಿಸಿ ಕಾಲೇಜ್‌ನ ಬಿಕಾಂ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಮತ್ತು ವೀರಶೈವ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿ ಮಹಮ್ಮದ್ ನಕೀಬಲಿ ತಲಾ ಎರಡು ಚಿನ್ನದ ಪದಕ ಪಡೆದರು.
ಘಟಿಕೋತ್ಸವದಲ್ಲಿ ಕಂಡಿದ್ದು:
ಘಟಿಕೋತ್ಸವದಲ್ಲಿ ಹಲವು ನ್ಯೂನತೆಗಳು ಕಂಡವು. ಘಟಿಕೋತ್ಸವದಲ್ಲಿ ಪ್ರಸ್ತಾವಿಕವಾಗಿ ಭಾಷಣ ಮಾಡಲು ಮುಂದಾದ ಕುಲಪತಿ ಪ್ರೊ ಮುನಿರಾಜು ಇಂಗ್ಲಿಷ್‌ನಲ್ಲಿ ಮಾತನಾಡಿದರು. ಲಿಖಿತ ರೂಪದ ಭಾಷಣವಾದರೂ ತಪ್ಪು ಉಚ್ಚಾರಣೆ ಮಾಡಿದರು. ಹಲವು ಬಾರಿ ತಪ್ಪು ಪದಗಳನ್ನು ಪ್ರಯೋಗಿಸಿದರು. ಪ್ರತಿ ಪದಕ್ಕೂ ಮೊದಲು ಇಂಗ್ಲಿಷ್‌ನ ‘ಎ’ ಅಕ್ಷರ ಬಳಸಿ ವಾಕ್ಯದ ಅರ್ಥವೇ ಬೇರೆ ಆಗುವಂತೆ ಭಾಷಣ ಓದಿದರು. ಇದು ನಗೆಪಾಟಲಿಗೆ ಈಡಾಯಿತು. ವಸುಂದರಾ ಭೂಪತಿ ಅವರಿಗೆ ತೊಡಿಸಿದ್ದ ಪೇಟ ಕಿರಿಕಿರಿ ಸೃಷ್ಟಿಸಿತು. ಕಡ್ಡಾಯವೇನೋ ಎಂಬಂತೆ ತೊಡಲಾಗಿದ್ದ ಪೇಟವನ್ನು ಸರಿಪಡಿಸಿಕೊಳ್ಳುವುದೇ ಅವರಿಗೆ ತ್ರಾಸದಾಯಕವಾಗಿ ಪರಿಣಮಿಸಿತ್ತು. ಹೀಗಾಗಿ ಅವರು ಅನಗತ್ಯ ಮುಜುಗರಕ್ಕೆ ಒಳಗಾಗಬೇಕಾಯಿತು. ಪದವಿ ಪ್ರಮಾಣ ಪತ್ರವನ್ನು ರಾಜ್ಯಪಾಲರಿಂದಲೇ ಪಡೆಯಲು ವಿದ್ಯಾರ್ಥಿಗಳು ಸಂಶೋಧನಾರ್ಥಿಗಳು ಉತ್ಸುಕರಾಗಿದ್ದರಾದರೂ ಒಂದು ಫೋಟೊಕ್ಕೂ ಅವಕಾಶ ಸಿಗದಷ್ಟು ಅವಸರವಸರದಲ್ಲಿ ರಾಜ್ಯಪಾಲರು ಪದವಿ ಪ್ರಮಾಣ ಪತ್ರ ವಿತರಿಸಿದರು. ಭೋಜನ ಅವ್ಯವಸ್ಥೆಯಾಗಿತ್ತು. ಆಸನಗಳು ಸಿಗದೇ ಜನ ಒದ್ದಾಡಿದರು. ಪ್ಲಾಸ್ಟಿಕ್ ಬಾಟಲಿಗಳು ಎಲ್ಲೆಂದರಲ್ಲಿ ಹರಡಿಕೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.