ADVERTISEMENT

ಚಿರತೆ ಸೆರೆಗೆ ಡಿಜಿಟಲ್ ಟ್ರ್ಯಾಪ್‌ ಕ್ಯಾಮೆರಾ ಬಳಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 13:52 IST
Last Updated 16 ಡಿಸೆಂಬರ್ 2018, 13:52 IST
ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯು ಅಳವಡಿಸಲಿರುವ  ಡಿಜಿಟಲ್ ಟ್ರ್ಯಾಪ್‌ ಕ್ಯಾಮೆರಾ
ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯು ಅಳವಡಿಸಲಿರುವ  ಡಿಜಿಟಲ್ ಟ್ರ್ಯಾಪ್‌ ಕ್ಯಾಮೆರಾ   

ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಮೂರು ವರ್ಷದ ಬಾಲಕನನ್ನು ಬಲಿ ಪಡೆದ ಚಿರತೆ ಸೆರೆಗಾಗಿ ಮೂರು ಡಿಜಿಟಲ್ ಟ್ರ್ಯಾಪ್‌ ಕ್ಯಾಮೆರಾ ಬಳಸಲಾಗುತ್ತಿದೆ.

ಚಿರತೆ ಚಲನವಲನ ಇರುವ ಎರದಮಟ್ಟಿ ಪ್ರದೇಶದಲ್ಲಿ ಎರಡು ಮತ್ತು ನಾಡೋಜ ದರೋಜಿ ಈರಮ್ಮ ಸಮಾಧಿ ಬಳಿಯ ನೀರಿನ ಟ್ಯಾಂಕ್‌ ಬಳಿ ಒಂದು ಡಿಜಿಟಲ್ ಟ್ರ್ಯಾಪ್‌ ಕ್ಯಾಮೆರಾ ಅನ್ನು ಶುಕ್ರವಾರದಿಂದ ಅಳವಡಿಸಲಾಗುತ್ತಿದೆ.

‘ಎರಡು ದಿನದ ಕ್ಯಾಮೆರಾ ಮೆಮೊರಿ ಕಾರ್ಡ್‌ ಅನ್ನು ಪರಿಶೀಲಿಸಿದ್ದು, ಚಿರತೆ ಚಲನವಲನ ದಾಖಲಾಗಿಲ್ಲ. ಚಿರತೆ ಸಂಚರಿಸುವ ಪ್ರದೇಶದಲ್ಲಿ ನಿತ್ಯವೂ ಕ್ಯಾಮೆರಾಗಳನ್ನು ವಿವಿಧ ಕೋನಗಳಲ್ಲಿ ಅಳವಡಿಸಲಾಗುತ್ತಿದೆ. ಆದರೂ ಚಿರತೆ ರಾತ್ರಿ ಸಂಚಾರ ಕಂಡುಬರುತ್ತಿಲ್ಲ. ಸದ್ಯ ಐದು ಬೋನ್‌ಗಳನ್ನು ಅಳವಡಿಸಲಾಗಿದೆ. ಬಾಲಕನನ್ನು ಹೊತ್ತೊಯ್ದ ಎರದಮಟ್ಟಿ ಪ್ರದೇಶದಲ್ಲಿ ಭಾರಿ ಮುಳ್ಳು ಪೊದೆ ತೆರವುಗೊಳಿಸಿ 12 ದಾರಿಗಳನ್ನು ಜೆಸಿಬಿ ಯಂತ್ರದಿಂದ ಮಾಡಲಾಗಿದೆ’ ಎಂದು ಉಪ ವಲಯ ಅರಣ್ಯ ಅಧಿಕಾರಿ ಎಸ್‌. ದೇವರಾಜ್‌ ವಿವರಿಸಿದರು.

ADVERTISEMENT

ಶನಿವಾರ ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಬೆಳೆದಿದ್ದ ಭಾರಿ ಮುಳ್ಳು ಪೊದೆಯನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ನಿತ್ಯ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚಿರತೆ ಸೆರೆಗಾಗಿ ಕಟ್ಟೆಚ್ಚರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.