ADVERTISEMENT

ದೊಡ್ಡಬಸವೇಶ್ವರ ಮಹಾ ರಥೋತ್ಸವ; ಸಂಜೆ ಬದಲು ಮಧ್ಯಾಹ್ನ ರಥ ಎಳೆಯಲು ನಿರ್ಣಯ

ದೊಡ್ಡಬಸವೇಶ್ವರ ಮಹಾ ರಥೋತ್ಸವ; ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 3:08 IST
Last Updated 24 ಫೆಬ್ರುವರಿ 2026, 3:08 IST
ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಥೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ನರಸಪ್ಪ ತಹಶೀಲ್ದಾರ್ ಮಾತನಾಡಿದರು
ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಥೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ನರಸಪ್ಪ ತಹಶೀಲ್ದಾರ್ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಕುರುಗೋಡು: ಪಟ್ಟಣದಲ್ಲಿ ಮಾರ್ಚ್‌ 3ರಂದು ಜರುಗುವ ದೊಡ್ಡಬಸವೇಶ್ವರ ಮಹಾ ರಥೋತ್ಸವದಂದು ಮಧ್ಯಾಹ್ನ ರಥ ಎಳೆಯಲು ಸೋಮವಾರ ಜರುಗಿದ ರಥೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಾರ್ವಜನಿಕರಿಗೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಸಂಜೆಯ ಬದಲು ಮಧ್ಯಾಹ್ನ ರಥ ಎಳೆಯಲು ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿರುವ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಕೆಲವು ಜನರು ಏರು ಧ್ವನಿಯಲ್ಲಿ ನಿರ್ಣಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸಭೆಯಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಮಧ್ಯಪ್ರವೇಶಿಸಿದ ಸಿಪಿಐ ಬಾಳನಗೌಡ ಎಸ್. ಮಾನಶೆಟ್ಟಿ, ಸಮಾಧಾನವಾಗಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಸೂಚಿಸಿದ ನಂತರ ಸಭೆಯಲ್ಲಿ ಶಾಂತಿ ನೆಲೆಸಿತು.

ADVERTISEMENT

ಕೊನೆಯಲ್ಲಿ ಗ್ರಹಣ ಇರುವುದರಿಂದ ಆಡಳಿತ ಮಂಡಳಿ ನಿರ್ಧರಿಸಿದ ಸಮಯಕ್ಕೆ ರಥ ಎಳೆಯಲು ಸಾರ್ವಜನಿಕರು ಸಮ್ಮತಿಸಿದರು.

ರಥೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯ, ಸಾರಿಗೆ ಸೇವೆ, ಪೊಲೀಸ್ ಭದ್ರತೆ, ನಿರಂತರ ವಿದ್ಯುತ್, ಆರೋಗ್ಯ ಸೇವೆ ಕಲ್ಪಿಸಲು ಆಯಾ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ರಥ ಸಾಗುವ ಎರಡೂ ಬದಿಯಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಹಾಕಬಾರದು ಎನ್ನುವ ನಿರ್ಣಯಕ್ಕೆ ಬರಲಾಯಿತು.

ರಥಕ್ಕೆ ಕುಂಭ ಸಮರ್ಪಿಸುವ ಕೆರೆಕೆರೆ, ಸೋಮಲಾಪುರ ಮತ್ತು ಮುಷ್ಟಗಟ್ಟೆ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಪಿಎಸ್‍ಐ ಸುಪ್ರಿತ್ ಮಾಹಿತಿ ನೀಡಿದರು.

ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಆಯಕಟ್ಟಿನ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಮತ್ತು ಆಂಬುಲೆನ್ಸ್ ವಾಹನಗಳನ್ನು ನಿಲ್ಲಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಜೆ.ಎನ್.ಗಣೇಶ್ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಾಳು ಆನಂದ, ಸಿಪಿಐ. ಬಾಳನಗೌಡ ಎಸ್. ಮಾನಶೆಟ್ಟಿ ಮತ್ತು ಪಿಎಸ್‍ಐ ಸುಪ್ರಿತ್, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.