ಹೂವಿನಹಡಗಲಿ: ತಾಲ್ಲೂಕಿನ ಬ್ಯಾಲಹುಣ್ಸಿಯಲ್ಲಿ ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ.
ಕತ್ತೆಬೆನ್ನೂರು ಇತರೆ ಐದು ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌ಗೆ ಜೋಡಣೆ ಇರುವ ವಿದ್ಯುತ್ ಪರಿವರ್ತಕ ಸುಟ್ಟಿದ್ದು, ಮೂರು ದಿನಗಳಿಂದ ಯೋಜನೆ ಬಂದ್ ಆಗಿದೆ. ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದ್ದು, ಬ್ಯಾಲಹುಣ್ಸಿಯಲ್ಲಿ ಬೋರ್ ವೆಲ್ ಸಂಪರ್ಕವನ್ನು ಈ ಹಿಂದೆ ಕಡಿತಗೊಳಿಸಿರುವುದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಬವಿಸಿದೆ.
ಗ್ರಾಮದ ಪಕ್ಕದಲ್ಲೇ ಹರಿಯುವ ತುಂಗಭದ್ರಾ ನದಿಗೆ ತೆರಳಿ ಜನರು ಕೊಡ, ಬಿಂದಿಗೆಗಳಲ್ಲಿ ನೀರು ತರುತ್ತಿದ್ದಾರೆ. ‘ಗ್ರಾಮಸ್ಥರು ನದಿಯ ಕಚ್ಚಾ ನೀರನ್ನೇ ಸೇವಿಸುತ್ತಿದ್ದಾರೆ. ಏನಾದರೂ ಅನಾರೋಗ್ಯ ಸಮಸ್ಯೆ ಉಂಟಾದರೆ ಯಾರು ಹೊಣೆ’ ಎಂದು ಗ್ರಾಮದ ಮುಖಂಡ ಬಿ.ಲಕ್ಷ್ಮಣ ಪ್ರಶ್ನಿಸಿದ್ದಾರೆ.
ಕೂಡಲೇ ಬಹುಗ್ರಾಮ ಯೋಜನೆಯ ವಿದ್ಯುತ್ ಪರಿವರ್ತಕ ದುರಸ್ತಿಗೊಳಿಸಿ ಶುದ್ದೀಕರಿಸಿದ ನೀರನ್ನು ಗ್ರಾಮಗಳಿಗೆ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.