
ಕುರುಗೋಡು: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ನಾಲೆಗಳಿಗೆ ಎರಡನೇ ಬೆಳೆಗೆ ನೀರು ಹರಿಸುವ ಕ್ರಿಯೆಗೆ ತಡೆಯೊಡ್ಡಿದೆ. ಬೇಸಿಗೆ ಬೆಳೆಗೆ ನೀರು ದೊರೆಯದೇ ರೈತರ ಜತೆಗೆ ವಲಸೆ ಬಾತುಕೋಳಿ ಸಾಕಾಣಿಕೆದಾರರೂ ಸಂಕಷ್ಟ ಎದುರಿಸುವಂತಾಗಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ನಾರ್ಪಲ ಮಂಡಲದ ಬಂದಲವಾಡ ಗ್ರಾಮದ ಕುಟುಂಬವೊಂದು ಸಾವಿರಾರು ಬಾತುಕೋಳಿಗಳೊಂದಿಗೆ ತಾಲ್ಲೂಕಿನ ಯರಿಂಗಳಿಗಿ ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿದ್ದು, ಭತ್ತದ ಗದ್ದೆಗಳಲ್ಲಿನ ನೀರಿನ ಕೊರತೆಯಿಂದ ಸ್ವಗ್ರಾಮಗಳತ್ತ ಮುಖಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾತುಕೋಳಿಗಳು ಭತ್ತದ ಗದ್ದೆಗಳಲ್ಲಿ ಹುಳು ಮತ್ತು ಕೀಟಗಳನ್ನು ತಿನ್ನುವ ಮತ್ತು ಹಿಕ್ಕೆ ಹಾಕುವುದರಿಂದ ರೈತರು ಪ್ರತಿವರ್ಷ ಅವರಿಗೆ ಪ್ರೋತ್ಸಾಹಿಸುತ್ತಿದ್ದರು. ಪ್ರತಿ ವರ್ಷ ಎರಡನೇ ಬೆಳೆ ಕಟಾವು ಹಂತದ ಸಂದರ್ಭದಲ್ಲಿ ಮಾರ್ಚ್ ತಿಂಗಳಲ್ಲಿ ಬರುತ್ತಿದ್ದ ಬಾತುಕೋಳಿಗಳು ಈ ವರ್ಷ ಬೇಸಿಗೆ ಬೆಳೆ ಇಲ್ಲದ ಕಾರಣ ಜನವರಿಯಲ್ಲಿಯೇ ಬಂದಿದ್ದು, ಭತ್ತದ ಗದ್ದೆಗಳಲ್ಲಿ ಬೀಡುಬಿಟ್ಟಿವೆ.
ಆಂಧ್ರಪ್ರದೇಶದ ತಮ್ಮ ಗ್ರಾಮಗಳಲ್ಲಿ ಮಳೆಯಾಶ್ರಿತ ಭೂಮಿ ಹೊಂದಿರುವ ಅವರು ಮುಂಗಾರು ಹಂಗಾಮಿನ ಬೆಳೆ ಕಟಾವಿನ ನಂತರ ಸ್ಥಳೀಯವಾಗಿ ಅವರಿಗೆ ಉದ್ಯೋಗ ದೊರೆಯುವುದಿಲ್ಲ. ಜೀವನ ನಿರ್ವಹಣೆ ಮತ್ತು ಬಾತುಕೋಳಿ ನಿರ್ವಹಣೆಗಾಗಿ ವಲಸೆ ಬರುತ್ತಾರೆ. ಭತ್ತದ ಗದ್ದೆ ಮಾಲೀಕರು ನೀಡುವ ಅಲ್ಪಸ್ವಲ್ಪ ಹಣ ದಿಂದ ಜೀವನ ನಿರ್ವಹಣೆ ಮಾಡುತ್ತಾರೆ. ಈ ವರ್ಷ ಬೇಸಿಗೆ ಬೆಳೆಗೆ ನೀರಿಲ್ಲದ ಪರಿಣಾಮ ರೈತರ ಜತೆಗೆ ಬಾತುಕೋಳಿಗಳಿಗೆ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.
’ಐದಾರು ಕುಟುಂಬಗಳು ಬಾತುಕೋಳಿಗಳೊಂದಿಗೆ ಕುರುಗೋಡು, ಕಂಪ್ಲಿ ಮತ್ತು ಗಂಗಾವತಿ ಸುತ್ತಮುತ್ತಲಿನ ಗ್ರಾಮಗಳಿಗೆ ವಲಸೆ ಬಂದು ಮೂರು ತಿಂಗಳು ಬಿಡಾರ ಹೂಡಿ ಅಲ್ಲಿನ ಭತ್ತದ ಗದ್ದೆಗಳ ಬಯಲಲ್ಲಿ ಆಶ್ರಯ ಪಡೆಯುತ್ತಿದ್ದೆವು. ಮಳೆಗಾಲ ಪ್ರಾರಂಭಕ್ಕೂ ಮೊದಲು ಸ್ವಗ್ರಾಮಗಳಿಗೆ ತೆರಳುತ್ತಿದ್ದವು. ಆದರೆ ಈ ವರ್ಷ ಎರಡನೇ ಬೆಳೆಗೆ ನೀರು ಇಲ್ಲದ ಪರಿಣಾಮ ಬಾತುಕೋಳಿಗಳಿಗೂ ನೀರಿನ ಸಮಸ್ಯೆಯಾಗಿದೆ. ಈ ವರ್ಷ ಜೀವನ ನಿರ್ವಹಣೆ ಮತ್ತು ಬಾತುಕೋಳಿಗಳ ನಿರ್ವಹಣೆಗೆ ಕಷ್ಟವಾಗಿದೆ. ಈ ತಿಂಗಳ ನಂತರ ಬೇರೆಡೆಗೆ ಹೋಗುತ್ತೇವೆ’ ಎಂದು ಬಾತುಕೋಳಿ ಸಾಕಾಣಿಕೆ ದಾರ ಶಂಕ್ರಪ್ಪ ನೋವು ತೋಡಿಕೊಂಡರು.
ಬಾತುಕೋಳಿ ರೈತಸ್ನೇಹಿ ಪಕ್ಷಿ: ಭತ್ತ ಬೆಳೆಯುವ ಜತೆಗೆ ಬಾತುಕೋಳಿಗಳನ್ನು ಸಾಕುವುದರಿಂದ ಈ ಪಕ್ಷಿಗಳು ಭತ್ತದ ಬೆಳೆಗೆ ಹಾನಿಕಾರಕವಾದ ಹುಳು ಮತ್ತು ಕೀಟಗಳನ್ನು ತಿನ್ನುತ್ತವೆ. ಬಾತುಕೋಳಿ ಹಿಕ್ಕೆ ಯಿಂದ ಭೂಮಿಯ ಭಲವತ್ತತೆ ಹೆಚ್ಚಾಗುತ್ತದೆ. ಗದ್ದೆಯಲ್ಲಿ ಬೆಳೆಯುವ ಕಳೆಯನ್ನು ತಡೆಯುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿ ದೇವರಾಜ್.
ಭತ್ತ ಕಟಾವಿನ ನಂತರ ಬಾತುಕೋಳಿಗಳನ್ನು ಗದ್ದೆಯಲ್ಲಿ ತಬ್ಬಿದರೆ ಹುಳು ಮತ್ತು ಕೀಟಗಳನ್ನು ತಿನ್ನುತ್ತವೆ. ಹಿಕ್ಕೆಯೂ ಗೊಬ್ಬರವಾಗಿ ಕೆಲಸಮಾಡುತ್ತದೆ. ಕ್ರಿಮಿನಾಶಕ ಮತ್ತು ಗೊಬ್ಬರಕ್ಕೆ ರೈತರು ವೆಚ್ಚಮಾಡುವ ಹಣ ಉಳಿಯುತ್ತದೆಚಾನಾಳು ಆನಂದ, ಭತ್ತದ ಬೆಳೆಗಾರ
ಬಾತುಕೋಳಿ ಮೊಟ್ಟೆಗೆ ಕೇರಳದಲ್ಲಿ ಹೆಚ್ಚು ಬೇಡಿಕೆ ಇದೆ. ಒಂದು ಮೊಟ್ಟೆಗೆ ₹6 ರಂತೆ ಮಧ್ಯವರ್ತಿಗಳು ವಲಸೆ ಬಾತುಕೋಳಿ ಮಲೀಕರಿಂದ ಖರೀದಿಸಿ ರವಾನಿಸುತ್ತಾರೆಸುಲೋಚನ ವಲಸೆ ಬಾತುಕೋಳಿ ಸಾಕಾಣಿಕೆ ರೈತ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.