ಬಳ್ಳಾರಿ: ‘ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆ ಪರವಾಗಿ ಮಾತನಾಡಿದ ಜಂಟಿ ನಿರ್ದೇಶಕ ಸೋಮಸುಂದರ್, ‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಜುಲೈ ಮಾಹೆಯವರೆಗೆ ಒಟ್ಟು 27,025 ಮೆ.ಟನ್‌ಗಳ ರಸಗೊಬ್ಬರ ಬೇಡಿಕೆ ಇದ್ದು, ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು 34,163 ಮೆ.ಟನ್ ದಾಸ್ತಾನು ಮಾಡಲಾಗಿತ್ತು. ಈ ಪೈಕಿ 25,887 ಮೆ.ಟನ್ ವಿತರಣೆಯಾಗಿ 8,286 ಮೆ.ಟನ್‌ಗಳಷ್ಟು ದಾಸ್ತಾನಿದೆ’ ಎಂದು ತಿಳಿಸಿದರು.
‘ಯೂರಿಯಾಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವುದನ್ನು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಮುಂಗಾರು ಪೂರ್ವ ಮತ್ತು ಪ್ರಸ್ತಕ ಮುಂಗಾರಿನಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಿಲ್ಲೆಯ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಪರಿವೀಕ್ಷಕರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ‘ರೈತರಿಗೆ ರಸಗೊಬ್ಬರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಅಥವಾ ಕೃತಕ ಅಭಾವ ಸೃಸ್ಟಿಸುವ ಪ್ರಸಂಗಗಳು ಕಂಡುಬಂದಲ್ಲಿ ಡಿಸಿ, ಎಸ್ಪಿ ಅವರ ಗಮನಕ್ಕೆ ತರಬೇಕು’ ಹೇಳಿದರು.
‘ಜಿಲ್ಲೆಯ ಸಾರ್ವಜನಿಕರಿಗೆ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗಬೇಕು. ಆಸ್ಪತ್ರೆ ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳು ಇರುವಂತೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಪಂ ಇಒಗಳು ಇದ್ದರು.
ಅಂಗನವಾಡಿ ಕೇಂದ್ರ ಶಾಲೆಗಳ ಮೇಲೆ ವಿದ್ಯುತ್ ಲೈನ್ ಇರುವಂತಿಲ್ಲ. ಡಿಡಿಪಿಐ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜೆಸ್ಕಾಂ ಅಧಿಕಾರಿಗಳು ಸರ್ವೆ ನಡೆಸಿ ತೆರವುಗೊಳಿಸಬೇಕುತ್ರಿಲೋಕ ಚಂದ್ರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ವಿಮ್ಸ್ ನಿರ್ದೇಶಕರ ಮೇಲೆ ಡಿಸಿ ಅಸಮಾಧಾನ:
‘ಬಿಎಂಸಿಆರ್‌ಸಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗುತ್ತಿಲ್ಲ. ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯರು ಲಭಿಸುತ್ತಿಲ್ಲ ರಕ್ತ ಔಷಧಿ ಹಾಗೂ ಸಾಮಾನ್ಯ ವೀಲ್ ಚೇರ್ ವ್ಯವಸ್ಥೆಗೂ ಸಹ ಹಣ ಪಡೆಯುತ್ತಾರೆ ಎಂದು ಪ್ರತಿದಿನ ನನ್ನ ಕಚೇರಿಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಗೃಹರಕ್ಷಕದಳ ಸಿಬ್ಬಂದಿಯಿಂದ ಹಿಡಿದು ಹೊರಗುತ್ತಿಗೆ ನೌಕರರು ವೈದ್ಯರು ಸಹ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ’ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಬಿಎಂಸಿಆರ್‌ಸಿ ನಿರ್ದೇಶಕರ ಡಾ ಗಂಗಾಧರ ಗೌಡ ವಿರುದ್ಧ ಅಸಮಾಧಾನ ಹೊರಹಾಕಿದರು. ‘ಕೇವಲ ಕಟ್ಟಡ ನಿರ್ಮಾಣ ಟೆಂಡರ್ ಪ್ರಕ್ರಿಯೆ ಚಿಕಿತ್ಸೆ ಉಪಕರಣ ಕುರಿತಂತೆ ಪ್ರಸ್ತಾಪಿಸುವುದಲ್ಲ. ಯಾವುದೇ ಸಭೆಗಳಿಗೂ ನೀವು ಹಾಜರಾಗುವುದಿಲ್ಲ ಎಂದ ಅವರು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು’ ಎಂದು ಬಿಎಂಸಿಆರ್‌ಸಿ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.