ADVERTISEMENT

ಬಳ್ಳಾರಿ | ಪರೀಕ್ಷಾ ಅಕ್ರಮ: ಹೆಚ್ಚುವರಿ ಆಯುಕ್ತರಗೆ ದೂರು ವರ್ಗ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:52 IST
Last Updated 15 ಸೆಪ್ಟೆಂಬರ್ 2025, 5:52 IST
   

ಬಳ್ಳಾರಿ: ಮೇ ಮತ್ತು ಜೂನ್‌ ತಿಂಗಳಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ–02 ವೇಳೆ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದ ದೂರನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯು ಕಲಬುರಗಿ ವಿಭಾಗದ  ಹೆಚ್ಚುವರಿ ಆಯುಕ್ತರ ಕಚೇರಿಗೆ ವರ್ಗಾಯಿಸಿದೆ. 

ನಗರದ ಪರೀಕ್ಷಾ ಕೇಂದ್ರ–275ಟಿಟಿಯಲ್ಲಿ ನಿರ್ದಿಷ್ಟ ಮೂರು ನೋಂದಣಿ ಸಂಖ್ಯೆಯ ವಿದ್ಯಾರ್ಥಿಗಳಿಗೆ ‘31ಇ’ ಆಂಗ್ಲ ವಿಷಯದ ಉತ್ತರ ಪತ್ರಿಕೆ ಬುಕ್‌ಲೆಟ್ ಬದಲಿಗೆ ಗಣಿತ ವಿಷಯದ ಬುಕ್‌ಲೆಟ್‌ನಲ್ಲಿ ಪರೀಕ್ಷೆ ಬರೆಸಲಾಗಿತ್ತು. ಮೂರೂ ಉತ್ತರ ಪತ್ರಿಕೆಗಳಲ್ಲಿ ಒಂದೇ ರೀತಿಯ ಉತ್ತರ, ಒಂದೇ ರೀತಿಯ ತಪ್ಪುಗಳನ್ನು ಬರೆಯಲಾಗಿತ್ತು. ಬೆಂಗಳೂರಿನ ಆರ್‌ವಿ ಬಾಲಕೀಯರ ಪ್ರೌಢಶಾಲೆಯಲ್ಲಿ ಮೌಲ್ಯ ಮಾಪನ ನಡೆಯುವ ಸಂದರ್ಭದಲ್ಲಿ ಈ ವಿಷಯ ಗೊತ್ತಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿರುವುದಾಗಿ ಜಂಟಿ ಮೌಲ್ಯಮಾಪಕರು ಮಂಡಳಿಗೆ ವರದಿಮಾಡಿದ್ದರು.

ಇದನ್ನು ಆಧರಿಸಿ ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯೂ ಸೇರಿದಂತೆ ಹಲವರಿಗೆ ನೋಟಿಸ್‌ ಜಾರಿ ಮಾಡಿದ್ದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.  

ADVERTISEMENT

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಊಳೂರು ಸಿದ್ದೇಶ ಎಂಬುವವರು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಗೆ ದೂರು ನೀಡಿದ್ದರು. 

ಸದ್ಯ ಈ ದೂರನ್ನು ಇಲಾಖೆಯ ನಿರ್ದೇಶಕರು (ಆಡಳಿತ) ಆ. 29ರಂದು ಕಲಬುರಗಿ ವಿಭಾಗದ  ಹೆಚ್ಚುವರಿ ಆಯುಕ್ತರ ಕಚೇರಿಗೆ ವರ್ಗಾಯಿಸಿದ್ದಾರೆ. ಜತೆಗೆ, ದೂರಿನ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆಯೂ, ಸಂಬಂಧಿಸಿದವರಿಗೆ ಮಾಹಿತಿ ಒದಗಿಸುವಂತೆಯು, ಪ್ರತಿಯನ್ನು ಸರ್ಕಾರಕ್ಕೆ ಹಾಗೂ ಆಯುಕ್ತರ ಕಚೇರಿಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.