ADVERTISEMENT

ನಕಲಿ ದಾಖಲೆ: ವಸತಿ ಶಾಲೆಯಲ್ಲಿ ಸೀಟು

ಸಿ.ಶಿವಾನಂದ
Published 3 ಆಗಸ್ಟ್ 2025, 6:45 IST
Last Updated 3 ಆಗಸ್ಟ್ 2025, 6:45 IST
ಹಗರಿಬೊಮ್ಮನಹಳ್ಳಿಯಲ್ಲಿರುವ ಅಂಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ
ಹಗರಿಬೊಮ್ಮನಹಳ್ಳಿಯಲ್ಲಿರುವ ಅಂಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ   

ಹಗರಿಬೊಮ್ಮನಹಳ್ಳಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿಶೇಷ ಮೀಸಲಾತಿ ಅಡಿಯಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ನಕಲಿ ಪ್ರಮಾಣಪತ್ರ ಸಲ್ಲಿಸಿರುವ ದೂರುಗಳು ಕೇಳಿಬಂದಿವೆ.

ತಾಲ್ಲೂಕಿನಲ್ಲಿ ವಲ್ಲಭಾಪುರ, ಅಂಬಳಿ, ಹಂಪಸಾಗರ, ಉಪನಾಯಕನಹಳ್ಳಿಯಲ್ಲಿ ತಲಾ ಒಂದೊಂದು ಮೊರಾರ್ಜಿ ವಸತಿ ಶಾಲೆಗಳು ಮತ್ತು ವರಲಹಳ್ಳಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿ ಒಟ್ಟು 5 ವಸತಿ ಶಾಲೆಗಳು ಇವೆ.

ಪ್ರತಿ ವರ್ಷ 6ನೇ ತರಗತಿಗೆ ಪ್ರವೇಶ ಪರೀಕ್ಷೆಯ ಮೂಲಕ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಶೈಕ್ಷಣಿಕ ವರ್ಷದಿಂದ ಶೇಕಡ 50ರಷ್ಟು ಅಂದರೆ 25 ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಇನ್ನುಳಿದ 25ವಿದ್ಯಾರ್ಥಿಗಳನ್ನು ವಿಶೇಷ ಮೀಸಲಾತಿ ಅಡಿಯ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಸಫಾಯಿ ಕರ್ಮಚಾರಿಗಳ ಮುಕ್ಕಳು, ಚಿಂದಿ ಆಯುವವರ ಮಕ್ಕಳು, ಚಿತಗಾರದ ಮತ್ತು ಸ್ಮಶಾನ ಕಾರ್ಮಿಕರ ಮಕ್ಕಳು, ಮಾನ್ಯುವಲ್ ಸ್ಕ್ಯಾವೆಂಜರ್‌ಗಳ ಮಕ್ಕಳು, ಬಾಲಕಾರ್ಮಿಕರು ಹಾಗೂ ಜೀತವಿಮುಕ್ತ ಮಕ್ಕಳು, ಸಂಚಾರಿ ಕುರಿಗಾಹಿಗಳ ಮಕ್ಕಳು, ರಕ್ಷಿಸಲ್ಪಟ್ಟ ದೇವದಾಸಿಯರ ಮಕ್ಕಳು, ಎಚ್‍ಐವಿಗೆ ತುತ್ತಾದ ಪೋಷಕರ ಮಕ್ಕಳು, ಶೇಕಡ 25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ವಿಶೇಷ ಚೇತನರು, ಒಬ್ಬ ಪೋಷಕರನ್ನು ಹೊಂದಿರುವ ಮಕ್ಕಳು, ಅನಾಥ ಮಕ್ಕಳು, ಅಲೆಮಾರಿ ಸಮುದಾಯಗಳಿಗೆ ಸೇರಿರುವವರು, ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು, ಸೇವಾನಿರತ ಮತ್ತು ನಿವೃತ್ತ ಸೈನಿಕರ ಮಕ್ಕಳು ಹಾಗೂ ಎಸ್ಸಿ,ಎಸ್ಟಿ ಆಶ್ರಮ ವಸತಿ ಶಾಲೆಗಳಲ್ಲಿ 5 ನೇತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲದೆ ಕೇವಲ ಅರ್ಜಿಗಳನ್ನು ಸಲ್ಲಿಸಿದರೆ ಸಾಕು. ಅವರಿಗೆ ಪ್ರವೇಶ ನೀಡಬೇಕೆಂದು ಸರ್ಕಾರ ಆದೇಶಿಸಿದೆ.

ADVERTISEMENT

ಆದರೆ, ಇದನ್ನೇ ಬಂಡವಾಳಾಗಿಸಿಕೊಂಡ ಕೆಲವು ಪಾಲಕರು ಖೊಟ್ಟಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ, ಜತೆಯಲ್ಲಿ ವಸತಿ ಶಾಲೆಗಳ ಸಿಬ್ಬಂದಿ ಕೈಜೋಡಿಸಿದ್ದಾರೆ.

ಅಂಬಳಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆದ ವೀರಶೈವ ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬರಿಗೆ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ನೀಡುವ ಮೀಸಲಾತಿಯ ಅಡಿಯಲ್ಲಿ ಪ್ರವೇಶ ಕಲ್ಪಿಸಲಾಗಿದೆ.
ಮೇಲ್ನೋಟಕ್ಕೆ ಒಂದು ಪ್ರಕರಣ ಬಯಲಾಗಿದೆ. ಆದರೆ ಸಮಗ್ರ ತನಿಖೆ ನಡೆದಲ್ಲಿ ನಕಲಿ ದಾಖಲೆ ಸಲ್ಲಿಸಿದವರ ಸಂಪೂರ್ಣ ಮಾಹಿತಿ ದೊರೆಯಲಿದೆ ಎನ್ನುತ್ತಾರೆ ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬ್ಯಾಲಾಳು ಮಂಜುನಾಥ.

ವಸತಿ ಶಾಲೆಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಪ್ರವೇಶ ಪಡೆದಿರುವುದು ಖಂಡನೀಯ, ಈ ಕುರಿತಂತೆ ಸಂವಿಧಾನತ್ಮಕ ಹೋರಾಟ ನಡೆಸಲಾಗುವುದು, ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು. 

ಕೆಲಸದ ಒತ್ತಡದ ಅವಸರದಿಂದಾಗಿ ತಪ್ಪಾಗಿದೆ. ಪ್ರಾಂಶುಪಾಲರು ಈ ಕುರಿತು ಗಮನಕ್ಕೆ ತಂದಿದ್ದಾರೆ, ವಿದ್ಯಾರ್ಥಿಯ ಪ್ರವೇಶ ರದ್ದುಗೊಳಿಸುವಂತೆ ಮೌಖಿಕವಾಗಿ ತಿಳಿಸಲಾಗಿದೆ.
ಆರ್.ಶಾಂತನಗೌಡ, ಪಿಡಿಒ, ಬ್ಯಾಸಿಗಿದೇರಿ.
ಅಂಬಳಿ ವಸತಿ ಶಾಲೆಗೆ ಹೊಸದಾಗಿ ಬಂದಿದ್ದೇನೆ, ಗ್ರಾಮ ಪಂಚಾಯ್ತಿ ನೀಡಿದ ದಾಖಲೆಯ ಆಧಾರದ ಅಡಿಯಲ್ಲಿ ಪ್ರವೇಶ ಕಲ್ಪಿಸಲಾಗಿದೆ.
ದುರುಗಪ್ಪ, ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.