
ಎಫ್‌ಐಆರ್
ಬಳ್ಳಾರಿ: ನಗರದ ಉದ್ಯಮಿಯೊಬ್ಬರಿಗೆ ಬೆಳ್ಳಿ ಖರೀದಿ ಮತ್ತು ಮಾರಾಟದಲ್ಲಿ ವಂಚನೆ ಮಾಡಿದ ಆರೋಪದ ಮೇರೆಗೆ ನಗರದ ಆಭರಣದಂಗಡಿ ಮಾಲೀಕರೊಬ್ಬರ ಮೇಲೆ ಎಪಿಎಂಸಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
‘ಆಭರಣದಂಗಡಿ ಮಾಲೀಕ ಹರ್ಷ ಸೋನಿ ಅವರು ನಕಲಿ ಬೆಳ್ಳಿಗಟ್ಟಿಗಳನ್ನು ನೀಡಿದ್ದೂ ಅಲ್ಲದೇ, ತಮ್ಮಿಂದ ಖರೀದಿ ಮಾಡಿದ ಬೆಳ್ಳಿಗೆ ಪ್ರತಿಯಾಗಿ ಹಣ ಪಾವತಿ ಮಾಡದೇ ವಂಚಿಸಿದ್ದಾರೆ’ ಎಂದು ದೇರಾರಾಮ ಚೌದರಿ ಅವರು ಪೊಲೀಸರಿಗೆ ದೂರಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಳೇ ಬೆಳ್ಳಿ ಮಾರುವ, ಹೊಸ ಬೆಳ್ಳಿ ಖರೀದಿ ಮಾಡುವ ಪದ್ಧತಿ ದೇರಾರಾಮ ಚೌದರಿ ಅವರ ಮನೆತನದಲ್ಲಿದೆ ಎನ್ನಲಾಗಿದೆ. ಅದರಂತೆ ಹರ್ಷ ಸೋನಿ ಜೊತೆಗೆ ದೇರಾರಾಮ ಚೌದರಿ ಮತ್ತು ಸಂಬಂಧಿಗಳು ಬೆಳ್ಳಿ ಮಾರಾಟ ಮತ್ತು ಖರೀದಿ ಮಾತುಕತೆ ಮಾಡಿದ್ದರು.
ಹರ್ಷ ಸೋನಿಯಿಂದ ಒಟ್ಟು ₹10 ಲಕ್ಷ ಮೌಲ್ಯದ ಹೊಸ ಬೆಳ್ಳಿ ಖರೀದಿ ಮಾಡಲಾಗಿತ್ತು. ಆದರೆ, ಅದು ನಕಲಿ ಎಂದು ಆರೋಪಿಸಲಾಗಿದೆ. ಇದರ ಜತೆಗೆ, ₹45,77,590 ಬೆಳೆ ಬಾಳುವ 26.927 ಕೆ.ಜಿ ಚಿನ್ನವನ್ನು ಸೋನಿಗೆ ಮಾರಾಟ ಮಾಡಲಾಗಿತ್ತು. ಆದರೆ, ಹಣವನ್ನು ಸೋನಿ ಪಾವತಿ ಮಾಡಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.