ADVERTISEMENT

ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಿ: ತಹಶೀಲ್ದಾರ್ ಎಸ್. ಮಹಬಲೇಶ್ವರ

ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್‌ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 4:36 IST
Last Updated 13 ಮಾರ್ಚ್ 2021, 4:36 IST
ಕೂಡ್ಲಿಗಿ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್ ಎಸ್. ಮಹಬಲೇಶ್ವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು
ಕೂಡ್ಲಿಗಿ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್ ಎಸ್. ಮಹಬಲೇಶ್ವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು   

ಕೂಡ್ಲಿಗಿ: ಕೊರೊನಾ ಎರಡನೇ ಅಲೆ ಹರಡುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಹಶೀಲ್ದಾರ್ ಎಸ್. ಮಹಬಲೇಶ್ವರ ಹೇಳಿದರು. ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರೊನಾ ಹರಡುವಿಕೆಯನ್ನು ತಡೆಯಲು ಜನರು ಇನ್ನು ಮುಂದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿಗಳಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ವ್ಯಾಪಾರಿಗಳಿಗೆ ತಿಳಿಸಬೇಕು. ಮಾಸ್ಕ್ ಹಾಕದಿದ್ದರೆ ₹ 100 ರೂಪಾಯಿ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಎರಡನೇ ಬಾರಿ ಕೊರೊನಾ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಚೂಣಿ ವಿವಿಧ ಇಲಾಖೆಗಳ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಇತರೆ ಇಲಾಖೆಗಳ ಅಧಿಕಾರಿಗಳು ಸಹ ಲಸಿಕೆ ಪಡೆಯಬೇಕು ಎಂದರು.

ಸಾರ್ವಜನಿಕರಿಗೆ ಲಸಿಕೆ ಹಾಕಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಥವಾ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಲಸಿಕೆ ಹಾಕಿಸಲು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ದಿನ ತಲಾ 5 ಜನರನ್ನು ಕರೆ ತರಲು ಹೇಳಿ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಧಿಕಾರಿಗೆ ಸೂಚನೆ ನೀಡಿದರು. ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಡಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ಹೇಳಿದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಗಣಾಧಿಕಾರಿ ಜಿ.ಎಂ. ಬಸಣ್ಣ ಮಾತನಾಡಿ, ಗ್ರಾಮೀಣ ಭಾಗದ ಜನರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆ ಆಯಾ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ತಾಲ್ಲೂಕು ಆರೋಗ್ಯಧಿಕಾರಿ ಡಾ. ಷಣ್ಮುಖ ನಾಯ್ಕ್, ಕೊರೊನಾ ನೋಡಲ್ ಅಧಿಕಾರಿ ಡಾ. ಕೊಟ್ರೇಶ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಿ. ಪಕೃದ್ಧೀನ್ ಸಾಬ್, ಸಿಪಿಐ ವಸಂತ ಅಸೋದೆ, ಶಿಶು ಅಭಿವೃದ್ಧಿ ಆಧಿಕಾರಿ ನಾಗನಗೌಡ ಸಭೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.