ಬಳ್ಳಾರಿ: ‘ಅದಿರು ಅನ್ವೇಷಿಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಅರಣ್ಯ ಪ್ರದೇಶವನ್ನು ಕೊಟ್ಟಿಲ್ಲ. ಈಗಾಗಲೇ ಗಣಿಗಾರಿಕೆ ನಡೆದಿರುವ (ಬ್ರೋಕನ್ ಲ್ಯಾಂಡ್) ಜಾಗದಲ್ಲಿ ಅನ್ವೇಷಣೆ ನಡೆದಿದ್ದು, ಅದಕ್ಕೆ ಅನುಮತಿ ನೀಡಲಾಗಿದೆ. ಅನ್ವೇಷಣೆ ನಡೆಯುತ್ತಿರುವ ಸಂಪೂರ್ಣ ಜಾಗ ‘ಸಿ’ ವರ್ಗದ ಗಣಿಯ (ಗಡಿಗಿ ಮಿನರಲ್ಸ್) ಬ್ರೋಕನ್ ಲ್ಯಾಂಡ್ ಆಗಿದೆ’ ಎಂದು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸಂದೀಪ್ ಸೂರ್ಯವಂಶಿ ತಿಳಿಸಿದ್ದಾರೆ.
‘ಅದಿರು ಅನ್ವೇಷಣೆಗೆ ಇಲ್ಲಿ ಕೆಐಒಸಿಎಲ್ ಏಜೆನ್ಸಿ ಮಾತ್ರ ಇದೆ. ಅದಿರು ಅನ್ವೇಷಣೆ ಮಾಡಲು ಕೆಐಒಸಿಎಲ್‌ಗೆ ಅನುಮತಿ ಕೊಟ್ಟ ಮಾತ್ರಕ್ಕೆ ಅದು ಗಣಿಗಾರಿಕೆಗೆ ಅನುಮತಿ ಕೊಟ್ಟಂತೆಯೂ ಅಲ್ಲ. ನಿಗದಿತ ಸ್ಥಳದಲ್ಲಿ ಅದಿರಿನ ನಿಕ್ಷೇಪ ಇದೆಯೇ, ಇಲ್ಲವೇ ಎಂಬುದನ್ನು ಏಜೆನ್ಸಿ ಪತ್ತೆ ಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸುತ್ತದೆ. ಒಂದು ವೇಳೆ ಅದಿರು ದಾಸ್ತಾನು ಇದ್ದರೆ, ಗಣಿ ಇಲಾಖೆಯು ಬ್ಲಾಕ್ ರಚಿಸಿ, ಅದನ್ನು ಹರಾಜಿಗಿಡುತ್ತದೆ. ಗಣಿ ಅನುಮತಿ ನೀಡುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲಸ’ ಎಂದು ಅವರು ಹೇಳಿದ್ದಾರೆ.
ಸಂಡೂರಿನ ಹದ್ದಿನಪಡೆ ಅರಣ್ಯದ (ವರ್ಜಿನ್ ಅರಣ್ಯ) 1074 ಎಕರೆ ಪ್ರದೇಶದಲ್ಲಿ ಅದಿರು ಅನ್ವೇಷಣೆಗೆ ಅನುಮತಿ ಕೋರಿ ಕೆಐಒಸಿಎಲ್ ಸಲ್ಲಿಸಿದ್ದ ಪ್ರಸ್ತಾವವನ್ನು ಬಳ್ಳಾರಿ ವಲಯವು ಈ ಹಿಂದೆ ತಳ್ಳಿ ಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.