ADVERTISEMENT

ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಸಚಿವ ಆನಂದ್‌ ಸಿಂಗ್‌

ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 6:07 IST
Last Updated 15 ಜನವರಿ 2021, 6:07 IST
ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯಲ್ಲಿ ಸಂಕಲ್ಪ ಪಥ ಸಂಚಲನ ಮಾಡಿದರು
ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯಲ್ಲಿ ಸಂಕಲ್ಪ ಪಥ ಸಂಚಲನ ಮಾಡಿದರು   

ಹೊಸಪೇಟೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಹಮ್ಮಿಕೊಂಡಿರುವ ನಿಧಿ ಸಮರ್ಪಣ ಅಭಿಯಾನಕ್ಕೆ ಅರಣ್ಯ ಸಚಿವ ಆನಂದ್‌ ಸಿಂಗ್‌ ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಚಾಲನೆ ನೀಡಿದರು.

ರಾಮ–ಸೀತೆಗೆ ಪೂಜೆ ಸಲ್ಲಿಸಿ, ಅಭಿಯಾನದ ಕೂಪನ್‌ಗಳನ್ನು ಸಂಘದ ಕಾರ್ಯಕರ್ತರಿಗೆ ಹಸ್ತಾಂತರಿಸಿದರು. ಬಳಿಕ ನಗರದ ಮಲ್ಲಿಗಿ ಹೋಟೆಲ್‌ನಿಂದ ಪ್ರಮುಖ ಮಾರ್ಗಗಳ ಮೂಲಕ ವಡಕರಾಯ ದೇವಸ್ಥಾನದ ವರೆಗೆ ಕಾರ್ಯಕರ್ತರು ಪಥ ಸಂಚಲನ ನಡೆಸಿದರು.

ಇದಕ್ಕೂ ಮುನ್ನ ಮಾತನಾಡಿದ ಸಚಿವ ಆನಂದ್ ಸಿಂಗ್‌, ‘ರಾಮ ಮಂದಿರ ನಿರ್ಮಾಣಕ್ಕಾಗಿ ಅನೇಕ ಜನ ಕರ ಸೇವಕರು ಪ್ರಾಣ ತ್ಯಾಗ ಮಾಡಿದ್ದಾರೆ. ಈಗ ಭವ್ಯ ಮಂದಿರ ನಿರ್ಮಾಣದ ಕನಸು ಸಾಕಾರವಾಗುತ್ತಿದೆ. ಎಲ್ಲರೂ ಮಂದಿರ ನಿರ್ಮಾಣಕ್ಕೆ ಅಳಿಲು ಸೇವೆ ಮಾಡಿ ಇತಿಹಾಸದ ಪುಟಗಳಲ್ಲಿ ಸೇರಬೇಕು’ ಎಂದು ಹೇಳಿದರು.

ADVERTISEMENT

‘ಈ ಅಭಿಯಾನಕ್ಕೆ ಎಲ್ಲರೂ ಸ್ವಲ್ಪ ಸಮಯ ಕೊಡಬೇಕು. ಈ ಹಿಂದೆ ಸೋಮೇಶ್ವರ ಮಂದಿರ ಸಂರಕ್ಷಣೆಗೆ ನಮ್ಮ ಹಿರಿಯರು ಶ್ರಮಿಸಿರುವಂತೆ ನಾವು ರಾಮನ ಮಂದಿರಕ್ಕಾಗಿ ಶ್ರಮಿಸೋಣ. ಎಷ್ಟೇ ಬಡವರಿರಲಿ ಅವರು ಅವರ ಶಕ್ತ್ಯಾನುಸಾರ ದೇಣಿಗೆ ಕೊಡಬೇಕು. ಜಾತಿ, ಮತ ಭೇದವಿಲ್ಲದೆ ಪ್ರತಿಯೊಂದು ಮನೆಯಿಂದ ದೇಣಿಗೆ ಸಂಗ್ರಹಿಸಬೇಕು. ಯಾರಿಗೂ ಬಲವಂತ ಮಾಡಬೇಡಿ. ಅವರಿಗೆ ದೇಣಿಗೆ ಕೇಳಿ, ಕೊಟ್ಟರಷ್ಟೇ ಪಡೆದುಕೊಳ್ಳಿ ಒತ್ತಾಯ ಮಾಡಬೇಡಿ’ ಎಂದು ಮನವಿ ಮಾಡಿದರು.

‘ಇಡೀ ದೇಶದಲ್ಲಿಯೇ ಅತಿ ಹೆಚ್ಚು ದೇಣಿಗೆ ಕರ್ನಾಟಕದಿಂದ ಹೋಗಬೇಕು. ಅದರಲ್ಲೂ ವಿಜಯನಗರದಿಂದ ಹೆಚ್ಚಿನ ಹಣ ಸಂಗ್ರಹವಾಗಬೇಕು. ಅದಕ್ಕಾಗಿ ಎಲ್ಲರೂ ತನು, ಮನದಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ನಗರ ಸಂಘಟನಾ ಸಂಚಾಲಕ ಮನೋಹರ್‌ ಮಠದ ಮಾತನಾಡಿ, ‘ನಮಗೆ ಕರ ಸೇವಕರಾಗಿ ಕೆಲಸ ಮಾಡುವ ಭಾಗ್ಯ ಸಿಕ್ಕಿಲ್ಲ. ಆದರೆ, ಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಒಲಿದು ಬಂದಿದೆ. ಎಲ್ಲ ವಾರ್ಡ್‌, ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲಿ ಅಭಿಯಾನ ನಡೆಸಿ, ದೇಣಿಗೆ ಸಂಗ್ರಹಿಸೋಣ’ ಎಂದರು.

‘ರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಇಡೀ ದೇಶದಲ್ಲಿ ಮೂರುವರೆ ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗಕ್ಕೆ ಬೆಲೆ ಸಿಗಬೇಕು. ಅವರ ಆಶಯದಂತೆ ದಿವ್ಯವಾದ ಮಂದಿರ ನಿರ್ಮಾಣಕ್ಕಾಗಿ ಎಲ್ಲರೂ ಸಂಕಲ್ಪ ಮಾಡಿ, ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸೋಣ’ ಎಂದು ಹೇಳಿದರು. ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ ಇದ್ದರು.

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯಲ್ಲಿ ಸಂಕಲ್ಪ ಪಥ ಸಂಚಲನ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.