ADVERTISEMENT

ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ಜೆ.ಎನ್.ಗಣೇಶ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:34 IST
Last Updated 13 ಜೂನ್ 2025, 14:34 IST
ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಜೆ.ಎನ್.ಗಣೇಶ್ ಗೌರವಿಸಿದರು
ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಜೆ.ಎನ್.ಗಣೇಶ್ ಗೌರವಿಸಿದರು   

ಕುರುಗೋಡು: ‘ಯುವಜನತೆಯ ಹಿತದೃಷ್ಟಿಯಿಂದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು’ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಕುರುಗೋಡು ಸಿರಿ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಸ್ನಾತಕೋತ್ತರ ಕೇಂದ್ರ ತೆರೆಯಲು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದೇನೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ತಾಲ್ಲೂಕಿನ ಬೈಲೂರು ಗ್ರಾಮದ ಬಳಿ ಭೂಮಿ ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ ಮತ್ತೊಂದು ಮೊರಾರ್ಜಿ ದೇಸಾಯಿ ಶಾಲೆ ಪ್ರಾರಂಭಿಸಲಾಗುವುದು. ₹44 ಕೋಟಿ ವೆಚ್ಚದಲ್ಲಿ ಕುರುಗೋಡಿನ ಗಾಂಧಿ ತತ್ವಾಧಾರಿತ ಬಾಲಕಿಯ ವಸತಿ ಶಾಲೆ ನೂತನ ಕಟ್ಟಡ ನಿರ್ಮಾಣಮಾಡಲಾಗುವುದು’ ಎಂದರು.

ADVERTISEMENT

‘ಪರಿಶಿಷ್ಟಜಾತಿ/ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಕಂಪ್ಲಿ ಮತ್ತು ಕುರುಗೋಡು ಪಟ್ಟಣ ವ್ಯಾಪ್ತಿಯ ಬಹುತೇಕ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ ಕುರುಗೋಡು ಬಸ್ ಘಟಕಕ್ಕೆ 40 ಹೊಸ ಬಸ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಪ್ರಾಚಾರ್ಯ ಎಚ್. ರಾಮಕೃಷ್ಣ ಮಾತನಾಡಿದರು.

ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಕಾಲೇಜು ಆಂತರಿಕ ಗುಣಮಟ್ಟ ಕೋಶದ ಸಂಚಾಲಕಿ ಶಾಂತಲಾ, ಅಧ್ಯಾಪಕರಾದ ತಿಪ್ಪೇರುದ್ರ ಸಂಡೂರು, ಎನ್.ಮಧುಸೂಧನ್, ಶಶಿಕಾಂತ್, ಜ್ಞಾನಪ್ರಸೂನಾಂಭ, ಮಂಜುನಾಥ ಸ್ವಾಮಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.