ADVERTISEMENT

ವಿಜೃಂಭಣೆಯಿಂದ ಜರುಗಿದ ಅಂಬಾದೇವಿ, ಗಾಧಿಲಿಂಗಪ್ಪ ತಾತನ ರಥೋತ್ಸವ 

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:54 IST
Last Updated 14 ಮಾರ್ಚ್ 2024, 14:54 IST
ಏಳುಬೆಂಚಿ ಗ್ರಾಮದಲ್ಲಿ ಅಂಬಾದೇವಿ, ಗಾಧಿಲಿಂಗಪ್ಪ ತಾತನ  ರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು
ಏಳುಬೆಂಚಿ ಗ್ರಾಮದಲ್ಲಿ ಅಂಬಾದೇವಿ, ಗಾಧಿಲಿಂಗಪ್ಪ ತಾತನ  ರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು   

ತೋರಣಗಲ್ಲು: ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಅಂಬಾದೇವಿ, ಗಾಧಿಲಿಂಗಪ್ಪ ತಾತನ ರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಅಂಬಾದೇವಿ, ಗಾಧಿಲಿಂಗಪ್ಪ ತಾತನ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಬಂದ ದೇವಿಯ, ತಾತನ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಸರ್ವ ಭಕ್ತಾಧಿಗಳ ಹರ್ಷೋದ್ಗಾರದ ನಡುವೆ ರಥೋತ್ಸವವು ಪ್ರಾರಂಭವಾಯಿತು.

ಗ್ರಾಮದ ರಸ್ತೆಯ ಉದ್ದಕ್ಕೂ ನೆರದಿದ್ದ ವಿವಿಧ ಗ್ರಾಮಗಳ, ಸ್ಥಳೀಯ ಭಕ್ತರು ಅಂಬಾದೇವಿ, ಗಾಧಿಲಿಂಗಪ್ಪ ತಾತನ ರಥಕ್ಕೆ ಉತ್ತತ್ತಿ ಮತ್ತು ಬಾಳೆ ಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.
ಏಳುಬೆಂಚಿ ಗ್ರಾಮ ಕುಡತಿನಿ, ತಿಮ್ಮಲಾಪುರ, ದರೋಜಿ, ಮಾದಾಪುರ, ಸಿದ್ಧಮ್ಮನಹಳ್ಳಿ, ಶ್ರೀರಾಮರಂಗಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ADVERTISEMENT

ದೇವರಿಗೆ ಬಿಲ್ವ ಪತ್ರೆ ಪೂಜೆ, ಪಂಚಾಮೃತ ಅಭಿಷೇಕ, ಆಗಮಹೋಮ ಹಾಗೂ ಎಲೆಪೂಜೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ದೇವರಿಗೆ ವಿವಿಧ ಹೂ, ಆಭರಣಗಳಿಂದ ವಿಶೇಷ ಆಲಂಕಾರ ಮಾಡಲಾಗಿತ್ತು.

ರಥಕ್ಕೆ ಗ್ರಾಮದ ಭಕ್ತರು ವಿವಿಧ ಹೂ, ಬಣ್ಣದ ಬಾವುಟ, ಬಾಳೆ ಎಲೆಗಳಿಂದ ಆಲಂಕಾರ ಮಾಡಲಾಗಿತ್ತು. ಹೂ ಮಾಲೆ, ರುದ್ರಾಕ್ಷಿ ಮಾಲೆಗಳಿಂದ ತೇರನ್ನು ಸಿಂಗರಿಸಲಾಗಿತ್ತು. ರಥೋತ್ಸವದಲ್ಲಿ ಡೊಳ್ಳು, ನಗಾರಿ, ಸಮಾಳ, ನಂದಿಕೋಲು, ಭಜನೆ ಸೇರಿದಂತೆ ಇತರ ಕಲಾ ತಂಡಗಳು ಇದ್ದವು.

ಬೆದರಿದ ಗೂಳಿಗಳು: ರಥೋತ್ಸವ ನಡೆಯುವ ಗ್ರಾಮದ ಜನರಿಂದ ಎರಡು ಗೂಳಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎರಡು ಗೂಳಿಗಳು ಏಕಾಏಕಿ ವಾದ್ಯಗಳ ಶಬ್ದ, ಜನರ ಗಲಾಟೆಗೆ ಬೆದರಿದ್ದರಿಂದ ಭಕ್ತಾದಿಗಳು ಕೆಲಕಾಲ ಹೆಚ್ಚಿನ ಆತಂಕಕ್ಕೆ ಒಳಗಾದರು. ಗೂಳಿಗಳು ಗಾಬರಿಗೊಂಡು ಜನರ ಮೇಲೆ ಎರಗಿದವು ಜನರು ಗುಂಪು ಗುಂಪಾಗಿ ಚದುರಿ ರಕ್ಷಣೆಗಾಗಿ ಓಡಿಹೋದರು, ಕೆಲ ಜನರು ರಸ್ತೆಯ ಪಕ್ಕದಲ್ಲಿ ಬಿದ್ದರು ಆದರೆ ಯಾರಿಗೂ ಗಾಯವಾಗಲಿಲ್ಲ. ಪೊಲೀಸರ ಸಹಕಾರದಿಂದ ಜನರು ಗೂಳಿಗಳನ್ನು ನಿಧಾನವಾಗಿ ಹೊರ ಸಾಗಿಸಿದರು. ನಂತರ ರಥೋತ್ಸವವು ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.