ADVERTISEMENT

ಮಾಲವಿ ಗ್ರಾಮ ಪಂಚಾಯಿತಿ: ಶೌಚಾಲಯ ನಿರ್ಮಾಣ, ತೆರಿಗೆ ವಸೂಲಿಯಲ್ಲಿ ಸಾಧನೆ

ಮಾಲವಿ ಗ್ರಾಮ ಪಂಚಾಯಿತಿಗೆ ‘ಗಾಂಧಿ ಗ್ರಾಮ’ ಪ್ರಶಸ್ತಿ ಗರಿ

ಸಿ.ಶಿವಾನಂದ
Published 1 ಅಕ್ಟೋಬರ್ 2019, 19:45 IST
Last Updated 1 ಅಕ್ಟೋಬರ್ 2019, 19:45 IST
ಮಾಲವಿ ಗ್ರಾಮದ ಮುಖ್ಯರಸ್ತೆ
ಮಾಲವಿ ಗ್ರಾಮದ ಮುಖ್ಯರಸ್ತೆ   

ಹಗರಿಬೊಮ್ಮನಹಳ್ಳಿ:ಶೌಚಾಲಯ ನಿರ್ಮಾಣ, ತೆರಿಗೆ ವಸೂಲಿ, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮ ಸಭೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಲ್ಲಿ ಉತ್ತಮ ಸಾಧನೆ ತೋರಿರುವ ತಾಲ್ಲೂಕಿನ ಮಾಲವಿ ಗ್ರಾಮ ಪಂಚಾಯಿತಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಸಂದಿದೆ.

ಈ ಪಂಚಾಯಿತಿ ವ್ಯಾಪ್ತಿಗೆ ಹರೇಗೊಂಡನಹಳ್ಳಿ ಗ್ರಾಮ ಸೇರಿದೆ.ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1,415 ಕುಟುಂಬಗಳಿದ್ದು, ಈಗಾಗಲೇ 1,152 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 104 ನಿರ್ಮಿಸಬೇಕಿದೆ. 90ರಷ್ಟು ಗುರಿ ಸಾಧಿಸಲಾಗಿದೆ.

2018-19ನೇ ಸಾಲಿನಲ್ಲಿ ₹10.36 ಲಕ್ಷ ತೆರಿಗೆ ವಸೂಲಿಯಾಗಿದೆ. ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ₹2.17 ಕೋಟಿ ಪಾವತಿಸಲಾಗಿದೆ. ವಸತಿ ಯೋಜನೆಯಲ್ಲಿ 90 ಮನೆಗಳನ್ನು ನಿರ್ಮಿಸಲಾಗಿದೆ.

ADVERTISEMENT

‘ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಬೀದಿ ದೀಪಗಳ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಲಾಗಿದೆ. ನರೇಗಾ ಯೋಜನೆಯಲ್ಲಿ 86 ಸಾವಿರ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಸತತ ಬರಗಾಲವಿದ್ದರೂ ಶೇಕಡ 81ರಷ್ಟು ತೆರಿಗೆ ವಸೂಲಿ ಮಾಡುವುದು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿಯನ್ನು ಆಧರಿಸಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ.

‘ನೈರ್ಮಲ್ಯ ಕುರಿತು ಜಾಥಾ ನಡೆಸಿರುವುದು ಶೌಚಾಲಯ ನಿರ್ಮಾಣಕ್ಕೆ ಪೂರಕವಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಗೋಡೆ ಮೇಲೆ ‘ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡಬೇಡಿ’ ಮತ್ತು ‘ತೆರಿಗೆ ಪಾವತಿಸಿ, ಬೇಡಿಕೆ ಮುಂದಿಡಿ’ ಎನ್ನುವ ಕರ ಪತ್ರವನ್ನು ಅಂಟಿಸಲಾಗಿದ್ದು, ಅದರ ಫಲ ಸಿಕ್ಕಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ. ಮಂಜುನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.