ADVERTISEMENT

ಕುಡುತಿನಿ:ವಶಕ್ಕೆ ಪಡೆದಿರುವ ಭೂಮಿ ಕುರಿತು ಸಿಎಂ ಸಭೆ;ಕೈಗಾರಿಕೆ ಆರಂಭಿಸಲು ತಾಕೀತು

ಕುಡುತಿನಿಯಲ್ಲಿ ವಶಕ್ಕೆ ಪಡೆದಿರುವ ಭೂಮಿಯ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ

ಆರ್. ಹರಿಶಂಕರ್
Published 20 ನವೆಂಬರ್ 2025, 5:35 IST
Last Updated 20 ನವೆಂಬರ್ 2025, 5:35 IST
ಕೈಗಾರಿಕೆಗಳಿಗೆಂದು ಕುಡುತಿನಿ ಭಾಗದಲ್ಲಿ ವಶಕ್ಕೆ ಪಡೆಯಲಾಗಿರುವ ಭೂಮಿ, ರೈತರ ಪರಿಹಾರ  ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಭೆ. 
ಕೈಗಾರಿಕೆಗಳಿಗೆಂದು ಕುಡುತಿನಿ ಭಾಗದಲ್ಲಿ ವಶಕ್ಕೆ ಪಡೆಯಲಾಗಿರುವ ಭೂಮಿ, ರೈತರ ಪರಿಹಾರ  ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಭೆ.    

ಬಳ್ಳಾರಿ: ಬಳ್ಳಾರಿಯಲ್ಲಿ ಉಕ್ಕಿನ ಕಾರ್ಖಾನೆ ಹಾಕುವುದಾಗಿ ಹೇಳಿ ಹಿಂದೆ ಸರಿದಿರುವ ಆರ್ಸೆಲರ್‌ ಮಿತ್ತಲ್‌ ಕಂಪನಿಯು ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದು, ವಶಕ್ಕೆ ಪಡೆದಿರುವ  2,643 ಎಕರೆ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಲು ನಿರ್ಧರಿಸಿದೆ ಎಂದು ಗೊತ್ತಾಗಿದೆ. 

ಬಳ್ಳಾರಿ ಜಿಲ್ಲೆಯ ಕಾರ್ಖಾನೆ, ಕೈಗಾರಿಕೋದ್ಯಮ ಮತ್ತು ರೈತರ ಭೂ ಪರಿಹಾರ ಕುರಿತು ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಇಲಾಖೆಗಳ ಸಚಿವರು, ಶಾಸಕರು, ಕೈಗಾರಿಕೋದ್ಯಮಿಗಳ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ನಡೆಸಿದರು.  

ಕುಡತಿನಿ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆಂದು ವಶಕ್ಕೆ ಪಡೆಯಲಾಗಿರುವ ಒಟ್ಟು 10 ಸಾವಿರ ಎಕರೆಗೂ ಮಿಗಿಲಾದ ಪ್ರದೇಶ ನಿರುಪಯುಕ್ತವಾಗಿರುವುದರ ಕುರಿತು ಸಭೆಯಲ್ಲಿ ಗಹನವಾದ ಚರ್ಚೆ ನಡೆಯಿತು ಎನ್ನಲಾಗಿದೆ.  

ADVERTISEMENT

ಕುಡತಿನಿಯಲ್ಲಿ ಕೈಗಾರಿಕೆ ಹಾಕುವುದಿಲ್ಲ ಎಂದು ತಿಳಿಸಿರುವ ಆರ್ಸೆಲರ್‌ ಮಿತ್ತಲ್‌ ಆ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಹೇಳಿತು. ಆ ಭೂಮಿಯನ್ನು ಮತ್ತೆ ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರದ ಮುಂದೆ ತೀರ್ಮಾನಿಸಲಿದೆ. ಅದನ್ನು ಬೇರೊಂದು ಕಂಪನಿಗೆ ನೀಡುವ ಚಿಂತನೆ ನಡೆದಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

3,500 ಎಕರೆ ತೆಗೆದುಕೊಂಡಿರುವ ಬ್ರಹ್ಮಿಣಿ ಸ್ಟೀಲ್ಸ್‌, ಅದನ್ನು ಉತ್ತಮ್‌ ಗಾಲ್ವಾ ಕಂಪನಿಗೆ ಮಾರಿಕೊಂಡಿತ್ತು. ಈ ಜಾಗದಲ್ಲಿ ಉತ್ತಮ್‌ ಗಾಲ್ವಾ ಕಂಪನಿಯು 2027ರ ಹೊತ್ತಿಗೆ ‘ಗ್ರೀನ್‌ ಎನರ್ಜಿ’ ಘಟಕ ಹಾಕುವುದಾಗಿ ಸಭೆಗೆ ತಿಳಿಸಿರುವುದಾಗಿ ಗೊತ್ತಾಗಿದೆ. ₹36 ಸಾವಿರ ಕೋಟಿಯ ಈ ಘಟಕದಲ್ಲಿ 6 ಸಾವಿರ ಉದ್ಯೋಗ ಸಿಗುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿದವು. 

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌, ಬಳ್ಳಾರಿ ಸಂಸದ ಇ ತುಕಾರಾಂ, ಶಾಸಕರಾದ ಬಿ. ನಾಗೇಂದ್ರ, ಅನ್ನಪೂರ್ಣಾ, ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಹ್ಯಾರಿಸ್‌ ಸುಮೇರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಇದ್ದರು.

ಎನ್‌ಎಂಡಿಸಿಗೆ ಕಟ್ಟುನಿಟ್ಟಿನ ಸೂಚನೆ: ಕುಡತಿನಿ ಭಾಗದಲ್ಲಿ ಕಬ್ಬಿಣ ಕಾರ್ಖಾನೆ ಹಾಕುವುದಾಗಿ ಹೇಳಿ ಎನ್‌ಎಂಡಿಸಿ 2,843 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದೆ. ಸಂಡೂರಿನಲ್ಲಿ ಎರಡು ಕಬ್ಬಿಣದ ಅದಿರಿನ ಗಣಿಗಳನ್ನು ಹೊಂದಿದ್ದರೂ ಈ ಕಂಪನಿ ಕಬ್ಬಿಣ ಕಾರ್ಖಾನೆ ಹಾಕದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. 

ಸರ್ಕಾರದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಎನ್‌ಎಂಡಿಸಿಯು ಕೈಗಾರಿಕೆಯೊಂದನ್ನು ಹಾಕುವುದಾಗಿ ಭರವಸೆ ನೀಡಿದೆ. ಆದರೆ, ಕಬ್ಬಿಣ ಕಾರ್ಖಾನೆ ಹಾಕುವುದಿಲ್ಲ ಎಂದು ತಿಳಿಸಿದೆ ಎಂದು ಗೊತ್ತಾಗಿದೆ. ಯಾವ ಉದ್ದಿಮೆ ಆರಂಭ ಮಾಡುತ್ತೇವೆ ಎಂಬುದನ್ನು ಡಿ. 31ರ ಒಳಗಾಗಿ ಸರ್ಕಾರಕ್ಕೆ ತಿಳಿಸುವುದಾಗಿ ಎನ್‌ಎಂಡಿಸಿ ವಾಯಿದೆ ಪಡೆದಿದೆ ಎಂದು ಮೂಲಗಳು ಮಾಹಿತಿ ನೀಡಿದವು.

ಸಭೆ ಫಲಪ್ರದವಾಗಿದೆ. ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರ ಸೂಚನೆ ನೀಡಿದೆ. ಈ ಮೂಲಕ ಭೂಮಿ ಕೊಟ್ಟವರಿಗೆ ಉದ್ಯೋಗ ಒದಗಿಸುವ ಮೂಲಕ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿದೆ 
ತುಕಾರಾಂ ಬಳ್ಳಾರಿ ಸಂಸದ

ಜೀನ್ಸ್‌ ಪಾರ್ಕ್‌ ಸಿಇಟಿಪಿಗೆ ದುಡ್ಡು

ಕಲುಷಿತ ನೀರು ಸಂಸ್ಕರಣಾ ಘಟಕವಿಲ್ಲದೇ ಬಂದ್ ಆಗಿರುವ ಜೀನ್ಸ್‌ ಉದ್ಯಮಗಳಿಗೆ ವರವಾಗುವಂಥ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಎಲ್ಲ ಜೀನ್ಸ್‌ ಘಟಕಗಳಿಗೆ ಸೇರಿದಂತೆ ಒಂದೇ ಸಂಸ್ಕರಣಾ (ಸಿಇಟಿಪಿ) ಘಟಕ ನಿರ್ಮಿಸಲು ಹಣ ಒದಗಿಸುವುದಾಗಿ ಕೆಕೆಆರ್‌ಡಿಬಿ ತಿಳಿಸಿದೆ. ಇದರ ಜತೆಗೆ ಬೇರೆ ಮೂಲಗಳ ಅನುದಾನ ಹೊಂದಿಸಿ ಜೀನ್ಸ್‌ ಉದ್ಯಮಗಳಿಗೆ ಸಿಇಟಿಪಿ ನಿರ್ಮಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.