ADVERTISEMENT

ಹಾಲ್ ತಿಮಲಾಪುರ ಶಾಲೆಯಲ್ಲಿ ‘ಹಸಿರ ಸಿರಿ’

ಮಕ್ಕಳಿಗೆ ಗಿಡಮರಗಳ ಉಸ್ತುವಾರಿ : ಬಿಸಿಯೂಟಕ್ಕೆ ಕೈತೋಟದ ತರಕಾರಿ

ಕೆ.ಸೋಮಶೇಖರ
Published 5 ಏಪ್ರಿಲ್ 2019, 19:46 IST
Last Updated 5 ಏಪ್ರಿಲ್ 2019, 19:46 IST
ಹಾಲ್‌ ತಿಮಲಾಪುರ ಶಾಲೆಯ ಆವರಣದಲ್ಲಿ ಹಸಿರು ಪರಿಸರ ಬೆಳೆಸಿರುವ ಮಕ್ಕಳು
ಹಾಲ್‌ ತಿಮಲಾಪುರ ಶಾಲೆಯ ಆವರಣದಲ್ಲಿ ಹಸಿರು ಪರಿಸರ ಬೆಳೆಸಿರುವ ಮಕ್ಕಳು   

ಹೂವಿನಹಡಗಲಿ: ತಾಲ್ಲೂಕಿನ ಹಾಲ್ ತಿಮಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹಸಿರು ಪರಿಸರದಿಂದ ಕಂಗೊಳಿಸುತ್ತಿದೆ.ಶಿಕ್ಷಕರು, ಮಕ್ಕಳ ಪರಿಶ್ರಮದಿಂದ ಶಾಲಾ ಕೈತೋಟ ನಳನಳಿಸುತ್ತಿದೆ.

ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ನೂರಾರು ಗಿಡಮರಗಳು ತಂಪು ಸೂಸುತ್ತಿವೆ. ಕೆಂಡದಂತಹ ಬಿಸಿಲ ಝಳ ಅನುಭವಿಸಿದರು ಈ ಶಾಲೆಯ ಬಳಿ ಹೋದರೆ ಅಲ್ಲಿಂದ ಬೇಗನೆ ವಾಪಾಸು ಬರಲು ಮನಸ್ಸು ಮಾಡುವುದಿಲ್ಲ. ಹಸಿರು ಹೊದ್ದು ನಿಂತಿರುವ ಶಾಲಾ ಪರಿಸರ ಅಷ್ಟರ ಮಟ್ಟಿಗೆ ಆಕರ್ಷಣೀಯವಾಗಿದೆ.

ಮೂರು ವರ್ಷಗಳ ಹಿಂದೆ ಶಾಲೆಯ ಪರಿಸರದಲ್ಲಿ ಜಾಲಿ ಬೆಳೆದು ಬಿಕೋ ಎನ್ನುವ ಸ್ಥಿತಿ ಇತ್ತು. ಸುಣ್ಣ, ಬಣ್ಣ ಕಾಣದೇ ಶಾಲೆ ಕಳಾಹೀನವಾಗಿತ್ತು. ಕಾಂಪೌಂಡ್ ಇಲ್ಲದೇ ಜಾನುವಾರು, ಕುರಿ, ಮೇಕೆಗಳು ಾವರಣಕ್ಕೆ ನುಗ್ಗಿ ಬರುತ್ತಿದ್ದವು. ಕೆಲವೇ ದಿನಗಳ ಹಿಂದೆ ಈ ದುಃಸ್ಥಿತಿ ನೋಡಿದ್ದವರು ಈಗ ಅಚ್ಚರಿಪಡುವ ರೀತಿಯಲ್ಲಿ ಶಾಲೆ ಬದಲಾಗಿದೆ.

ADVERTISEMENT

ಈ ಶಾಲೆಯ ಮುಖ್ಯಶಿಕ್ಷಕರಾಗಿ ಉತ್ತಂಗಿ ಆನಂದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಶಾಲಾ ಪರಿಸರ ಸುಧಾರಣೆಗೆ ಆದ್ಯತೆ ನೀಡಿದ್ದಾರೆ. ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಶಾಲೆಯ ಸುತ್ತಲೂ ಕಾಂಪೌಂಡ್‌, ನೀರಿನ ಸಂಪು ನಿರ್ಮಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ನೆರವಿನ ಜತೆಗೆ ಶಿಕ್ಷಕರೂ ವಂತಿಗೆ ಹಾಕಿ ಸುಣ್ಣ, ಬಣ್ಣ ಬಳಿಸಿ ಶಾಲೆಯ ಅಂದ ಹೆಚ್ಚಿಸಿದ್ದಾರೆ.

ಮುಖ್ಯಶಿಕ್ಷಕ ಆನಂದ, ಶಿಕ್ಷಕರಾದ ವೀರಭದ್ರಗೌಡ ಪಾಟೀಲ, ಪಿ.ಎಂ.ಗಂಗಾಧರಯ್ಯ ಅವರ ಪರಿಸರ ಪ್ರೇಮದಿಂದ ಶಾಲೆಯಲ್ಲಿ ಹಸಿರ ಸಿರಿ ರೂಪುಗೊಂಡಿದೆ. ‘ಮಗುವಿಗೊಂದು ಗಿಡ, ಶಾಲೆಗೊಂದು ವನ’ ಪರಿಕಲ್ಪನೆ ಅಡಿ ಪ್ರತಿ ಮಗುವಿಗೂ ಒಂದೊಂದು ಗಿಡ ಬೆಳೆಸುವ ಹೊಣೆಗಾರಿಕೆ ವಹಿಸಿಕೊಟ್ಟಿದ್ದಾರೆ.

ಶಾಲೆ ಪ್ರಾರಂಭಕ್ಕೂ ಮುನ್ನ ಹಾಗೂ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಗಿಡ ಮರಗಳಿಗೆ ನೀರು ಹಾಕಿ ಕಾಳಜಿ ಮಾಡುತ್ತಾರೆ. ಚಿಕ್ಕ ಮಕ್ಕಳಿಗಾಗಿಯೇ ಶಿಕ್ಷಕರು ಸಣ್ಣ ಕೊಡಗಳ ವ್ಯವಸ್ಥೆ ಮಾಡಿದ್ದಾರೆ. ರಜೆ ದಿನಗಳಲ್ಲೂ ಮಕ್ಕಳು ಶಾಲೆಯ ಗಿಡಗಳಿಗೆ ನೀರು ಹಾಕುವುದು ವಿಶೇಷ.

ಆವರಣದಲ್ಲಿ ಬಾದಾಮಿ, ತೇಗ, ಬೇವು, ಗುಲ್‌ಮೊಹರ್, ಹೊಂಗೆ, ನೀಲಗಿರಿ, ಅರಳೆ, ಅಶೋಕ, ನಿಂಬೆ, ನೇರಳೆ, ಹಲಸಿನ ಹಣ್ಣಿನ ಗಿಡಗಳು ಹಾಗೂ ಅಲಂಕಾರಿಕ ಹೂವಿನ ಗಿಡಗಳನ್ನೂ ಬೆಳೆಸಲಾಗಿದೆ. ಶಾಲೆಯ ಒಂದು ಬದಿಯಲ್ಲಿ ಕೈತೋಟ ಅಭಿವೃದ್ಧಿಪಡಿಸಲಾಗಿದೆ. ಬದನೆ, ಟೊಮೆಟೋ, ಕರಿಬೇವು ಬೆಳೆಸಲಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

ಶಾಲಾ ಪರಿಸರ ಬದಲಾಗುತ್ತಿದ್ದಂತೆ ಮಕ್ಕಳ ದಾಖಲಾತಿಯೂ ಹೆಚ್ಚಳವಾಗಿದೆ. ಕಳೆದ ವರ್ಷ ಒಂದನೇ ತರಗತಿಗೆ 27 ಮಕ್ಕಳು ದಾಖಲಾಗಿದ್ದು, ಒಂದರಿಂದ ಐದನೇ ತರಗತಿವರೆಗೆ 85 ವಿದ್ಯಾರ್ಥಿಗಳಿದ್ದಾರೆ. ಪ್ರತಿವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಆನಂದ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸುತ್ತಾರೆ.

ಗ್ರಾಮದ ಶಿಕ್ಷಣ ಪ್ರೇಮಿಗಳು ಶಾಲೆಗೆ ಪಿೀಠೋಪಕರಣ, ಮಕ್ಕಳು ಬಿಸಿಯೂಟ ಸೇವಿಸಲು ತಟ್ಟೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಗ್ರಾಮೀಣ ಶಾಲೆಯ ಹಸಿರು ಪರಿಸರ, ಭೌತಿಕ ಪ್ರಗತಿ ಇತರೆ ಶಾಲೆಗಳಿಗೆ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.