ಲಕ್ಷ್ಮೇಶ್ವರ: ಪ್ರಮುಖ ಎಣ್ಣೆ ಬೆಳೆಗಳಲ್ಲಿ ಒಂದಾದ ಶೇಂಗಾ ದರ ಪಾತಾಳಕ್ಕೆ ಕುಸಿದಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲ್ಲೂಕಿನ ಸಾವಿರಾರು ಹೆಕ್ಟೇರ್‌ನಲ್ಲಿ ಪ್ರತಿವರ್ಷ ಶೇಂಗಾ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಮುಂಗಾರು ಹಂಗಾಮಿನಲ್ಲಿ ಕಪ್ಪುಭೂಮಿಯಲ್ಲಿ ಕಂಠಿ ಅಥವಾ ಗೆಜ್ಜೆ ಶೇಂಗಾ ಬೆಳೆದರೆ ಹಿಂಗಾರಿನಲ್ಲಿ ಬಳ್ಳಿ ಶೇಂಗಾ ಬೆಳೆಯವುದು ವಾಡಿಕೆ.
ತಾಲ್ಲೂಕಿನಲ್ಲಿ ಕಪ್ಪು ಭೂಮಿ ಇರುವ ಮಾಡಳ್ಳಿ, ಯಳವತ್ತಿ, ರಾಮಗೇರಿ, ಗೊಜನೂರು, ಬಟ್ಟೂರು, ಪುಟಗಾಂವ್‍ಬಡ್ನಿ, ಗೋವನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಕಂಠಿಶೇಂಗಾ ಬೆಳೆಯಲಾಗುತ್ತಿದೆ. ಅದರಂತೆ ಶಿಗ್ಲಿ, ಸೂರಣಗಿ, ದೊಡ್ಡೂರು, ಬಾಲೆಹೊಸೂರು, ಹುಲ್ಲೂರು ಬಳ್ಳಿಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಕಪ್ಪುಭೂಮಿಯಲ್ಲಿ ಬೆಳೆಯುವ ಕಂಠಿಶೇಂಗಾ ಮನೆ ಬಳಕೆಗೆ ಹೆಚ್ಚು ಖರ್ಚಾದರೆ ಬಳ್ಳಿಶೇಂಗಾ ಅಡುಗೆ ಎಣ್ಣೆ ತಯಾರಿಕೆಗೆ ಬಳಕೆ ಆಗುತ್ತದೆ. ಎರಡೂ ರೀತಿಯ ಶೇಂಗಾಕ್ಕೆ ಬೇಡಿಕೆ ಇದ್ದೇ ಇರುತ್ತದೆ.
ಬಿತ್ತನೆ: ಜೂನ್ ಮೊದಲ ವಾರದಲ್ಲಿ ಕಂಠಿಶೇಂಗಾದ ಬಿತ್ತನೆ ಮುಗಿಸಬೇಕು. ಇದು ಮೂರೂವರೆ ತಿಂಗಳಿಗೆ ಕಟಾವಿಗೆ ಬರುತ್ತದೆ. ಇನ್ನು ಬಳ್ಳಿ ಶೇಂಗಾದ ಬಿತ್ತನೆ ಜೂನ್ ಎರಡನೇ ವಾರದಲ್ಲಿ ಶುರುವಾಗಿ ಕೊನೆಯ ವಾರದಲ್ಲಿ ಮುಗಿಯಬೇಕು. ಇದು ನಾಲ್ಕು ತಿಂಗಳಿಗೆ ಕಟಾವಿಗೆ ಬರುತ್ತದೆ.
ಖರ್ಚು ವೆಚ್ಚ: ಒಂದು ಎಕರೆ ಶೇಂಗಾ ಬೆಳೆಯಲು ರೈತ ₹ 15-20 ಸಾವಿರ ಖರ್ಚು ಮಾಡಬೇಕಾಗುತ್ತದೆ. ಉತ್ತಮ ವಾತಾವರಣ ಇದ್ದರೆ ಒಂದು ಎಕರೆಯಲ್ಲಿ 10-12 ಕ್ವಿಂಟಲ್ ಕಂಠಿ ಶೇಂಗಾ ಬೆಳೆದರೆ 8-9 ಕ್ವಿಂಟಲ್ ಬಳ್ಳಿಶೇಂಗಾದ ಇಳುವರಿ ರೈತನ ಕೈ ಸೇರುತ್ತದೆ.
ಬೆಲೆ ಕುಸಿತ: ಸದ್ಯ ಬಳ್ಳಿಶೇಂಗಾ ಒಕ್ಕಣಿ ಮುಗಿದು ಮಾರಾಟಕ್ಕೆ ಬಂದಿದೆ. ಆದರೆ ದಿಢೀರನೇ ಬೆಲೆ ಕುಸಿತ ಕಂಡಿದೆ. ₹ 6,500-7,500 ರೂಪಾಯಿಗೆ ಮಾರಾಟವಾಗುತ್ತಿದ್ದ ಫಸಲು ಇದೀಗ ₹ 4,500ಕ್ಕೆ ಕುಸಿದಿದೆ. ಬೆಳೆಗಾರ ನಿಜಕ್ಕೂ ತೊಂದರೆಗೆ ಸಿಲುಕಿದ್ದಾನೆ. ಸರ್ಕಾರ ಕ್ವಿಂಟಲ್ ಶೇಂಗಾಕ್ಕೆ ₹ 6,875 ಬೆಂಬಲ ಘೋಷಣೆ ಮಾಡಿದೆ. ಆದರೆ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ.
‘ಸರ್ಕಾರ ಕೂಡಲೇ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸಲು ಮುಂದಾಗಬೇಕು. ಆದಷ್ಟು ಬೇಗನೇ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ಹಿತ ಕಾಯಬೇಕು’ ಎಂದು ಕೃಷಿಕ ಸಮಾಜದ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಆಗ್ರಹಿಸಿದರು.
ಚೊಲೋ ರೇಟ್ ಬರಬಹುದು ಅಂತಾ ನಂಬಿ ಶೇಂಗಾ ಬೆಳದೇವ್ರೀ. ಆದರ ಈಗ ನೋಡಿದರ ರೇಟ್ ಭಾಳ ಕಡಿಮಿ ಆಗೇತ್ರೀ. ಇದು ಮಾರುಕಟ್ಟೆಯ ತಂತ್ರ ಬೇಸರ ಮೂಡಿಸುತ್ತದೆಪ್ರಶಾಂತ ಉಮಚಗಿ ಶೇಂಗಾ ಬೆಳೆಗಾರ ಉಮಚಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.