ADVERTISEMENT

ಹಚ್ಚೋಳ್ಳಿ | ಕೆಸರು ಗದ್ದೆಯಾದ ಕಚ್ಚಾರಸ್ತೆ

ಗ್ರಾಮದೊಳಗೆ ಜನರು ಸಂಚರಿಸಲು ಸಾಹಸ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:34 IST
Last Updated 4 ಸೆಪ್ಟೆಂಬರ್ 2025, 6:34 IST
ಸಿರುಗುಪ್ಪ ತಾಲ್ಲೂಕಿನ ಹಚ್ಚೋಳ್ಳಿ ಗ್ರಾಮದ ಮುಖ್ಯ ರಸ್ತೆಯು ಕೆಸರು ಗದ್ದೆಯಂತೆಯಾಗಿದೆ
ಸಿರುಗುಪ್ಪ ತಾಲ್ಲೂಕಿನ ಹಚ್ಚೋಳ್ಳಿ ಗ್ರಾಮದ ಮುಖ್ಯ ರಸ್ತೆಯು ಕೆಸರು ಗದ್ದೆಯಂತೆಯಾಗಿದೆ   

ಸಿರುಗುಪ್ಪ: ತಾಲ್ಲೂಕಿನ ಹಚ್ಚೋಳ್ಳಿ ಗ್ರಾಮದ ಬಸ್‌ ನಿಲ್ದಾಣದಿಂದ ಗ್ರಾಮದೊಳಗೆ ಹೋಗುವ ಮಣ್ಣಿನ ಕಚ್ಚಾ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮಳೆಗಾಲಪೂರ್ತಿ ಕೆಸರು ಗದ್ದೆಯಾಗಿದರಿಂದ ಸಾರ್ವಜನಿಕರು ನರಕಯಾತನೆ ಅನುಭವಿಸುವ ದುಃಸ್ಥಿತಿ ನಿರ್ಮಾಣವಾಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದೊಳಗಿನ ರಸ್ತೆಗಳ ಸ್ಥಿತಿ ತುಂಬಾ ಬಿಗಡಾಯಿಸಿದೆ. ಗ್ರಾಮದ ಮುಖ್ಯರಸ್ತೆಯಿಂದ ಬಸ್‌ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿ ಹೇಳತೀರದು. ರಸ್ತೆಯ ಬದಿಯಲ್ಲಿ ತಿಪ್ಪೇ ಗುಂಡಿಗಳನ್ನು ಹಾಕಿದ್ದು, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲ.

ಗ್ರಾಮಸ್ಥರು ತಮ್ಮ ಮನೆಯಿಂದ ಬಸ್‌ ನಿಲ್ದಾಣ ತಲುಪಲು ಸಾಹಸ ಪಡಬೇಕಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ಹೊಸ ಸಿ.ಸಿ ರಸ್ತೆ ಅಥವಾ ಡಾಂಬರ್‌ ರಸ್ತೆ ನಿರ್ಮಾಣ ಮಾಡಿ ಮಳೆನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

‘ಗ್ರಾಮದ ಮುಖ್ಯರಸ್ತೆಯಲ್ಲಿ ಮಳೆನೀರು ಸಂಗ್ರಹವಾಗುತ್ತದೆ ಎನ್ನುವ ಕಾರಣಕ್ಕೆ ಮಣ್ಣು ತಂದು ಸುರಿಯಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ತಿಪ್ಪೆ ರಾಶಿ ಇರುವುದರಿಂದ ಮಳೆನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಮುಂದಿನ ದಿನದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ತಿಳಿಸಿದರು.

‘ಹಚೋಳ್ಳಿ ಗ್ರಾಮದ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.