ADVERTISEMENT

ಹಗರಿಬೊಮ್ಮನಹಳ್ಳಿ | ರಸ್ತೆಗಳಲ್ಲಿ ಪ್ರಯಾಣವೆಂಬ ನರಕ ದರ್ಶನ

‘ನಮ್ಮಜನ ನಮ್ಮಧ್ವನಿ’ ವಿಭಾಗಕ್ಕೆ

ಸಿ.ಶಿವಾನಂದ
Published 9 ಫೆಬ್ರುವರಿ 2026, 3:12 IST
Last Updated 9 ಫೆಬ್ರುವರಿ 2026, 3:12 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹೊಸ ಆನಂದೇವನಹಳ್ಳಿ ಬಳಿಯ ಹೊಸಪಪೇಟೆ- ಹರಿಹರ ರಾಜ್ಯ ಹೆದ್ದಾರಿ ಸ್ಥಿತಿ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹೊಸ ಆನಂದೇವನಹಳ್ಳಿ ಬಳಿಯ ಹೊಸಪಪೇಟೆ- ಹರಿಹರ ರಾಜ್ಯ ಹೆದ್ದಾರಿ ಸ್ಥಿತಿ   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿ ಸೇರಿದಂತೆ ಎಲ್ಲ ಜಿಲ್ಲ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳಲ್ಲಿ ತಗ್ಗುಗುಂಡಿಗಳದೇ ಕಾರುಬಾರು. ರಸ್ತೆಗಳ ಅಭಿವೃದ್ಧಿ ಕುರಿತು ಜನಪ್ರತಿನಿಧಿಗಳು ಪರಸ್ಪರ ಕೆಸೆರೆರೆಚಾಟದಲ್ಲಿ ತಲ್ಲೀನರಾಗಿದ್ದಾರೆಯೇ ವಿನಾ ಇದುವರೆಗೂ ಒಂದು ರಸ್ತೆಯೂ ಅಭಿವೃದ್ಧಿ ಆಗಿಲ್ಲ.

ಹೊಸಪೇಟೆ-ಹರಿಹರ ರಸ್ತೆಯಂತೂ ತಾಲ್ಲೂಕು ಪ್ರವೇಶ ಆದ ತಕ್ಷಣ ಇದು ಹಗರಿಬೊಮ್ಮನಹಳ್ಳಿ ತಾಲ್ಲೂಕು ಇರಬೇಕೆಂದು ಭಾಸವಾಗುತ್ತದೆ. ಕೆಂಚಟನಹಳ್ಳಿ, ವರದಾಪುರ, ಮರಬ್ಬಿಹಾಳು, ಉಪನಾಯಕನಹಳ್ಳಿ, ಪಿಂಜಾರ್ ಹೆಗ್ಡಾಳು, ಹೊಸ ಆನಂದೇವನಹಳ್ಳಿಯಿಂದ ಅಂದಾಜು 20ಕಿ.ಮೀ. ಅಂತರವನ್ನು ಪಟ್ಟಣ ತಲುಪುವ ಹೊತ್ತಿಗೆ ಪ್ರಯಾಣಿಕರು ಹೈರಾಣಾಗುತ್ತಾರೆ. ಬಸ್, ಕಾರು, ದ್ವಿಚಕ್ರವಾಹನ ಸವಾರರಿಗೆ ಇದೊಂದು ಸಾಹಸದ ಕೆಲಸವೇ ಆಗಿದೆ, ತಮ್ಮ ಗಮ್ಯ ಸ್ಥಾನ ತಲುಪುವ ಹೊತ್ತಿಗೆ ಯಾವುದೆ ರಸ್ತೆ ಅವಘಡ ಸಂಭವಿಸದೇ ಪ್ರಯಾಣವೆಂಬ ಹೋರಾಟದಲ್ಲಿ ಸಾಧನೆ ಮಾಡಿದವರಂತಾಗುತ್ತಾರೆ.

ಇನ್ನು ಪಟ್ಟಣದಿಂದ ಹರಪನಹಳ್ಳಿ, ಹೂವಿನಹಡಗಲಿಗೆ, ಕೂಡ್ಲಿಗಿ, ಕೊಟ್ಟೂರು, ನಂದಿಪುರ, ಹಂಪಸಾಗರಕ್ಕೆ ತಲುಪುವ ಜಿಲ್ಲಾ ಮುಖ್ಯ ರಸ್ತೆಗಳದು ಇದೇ ಗೋಳು. ರಸ್ತೆಯಲ್ಲಿ ತಗ್ಗುಗುಂಡಿಗಳಿಲ್ಲ, ಗುಂಡಿಗಳಲ್ಲಿಯೇ ರಸ್ತೆ ಇದೆ ಎನ್ನುವಂತಾಗಿದೆ. ಇನ್ನು ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಗೋಳು ಯಾರೂ ಕೇಳೊರಿಲ್ಲ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ.
ಪಕ್ಷಿಧಾಮಕ್ಕೆ ತೆರಳುವ ರಸ್ತೆಯಲ್ಲ, ಬರೀ ಗುಂಡಿಗಳು: ತಾಲ್ಲೂಕಿನ ಉಪನಾಯಕನಹಳ್ಳಿಯಿಂದ ಖ್ಯಾತ ಅಂಕಸಮುದ್ರ ಪಕ್ಷಿಧಾಮಕ್ಕೆ ತೆರಳುವ ರಸ್ತೆಯೇ ಇಲ್ಲ. ಬರೀ ತಗ್ಗುಗಳಿವೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸದ್ಯ ಗುಂಡಿಗಳನ್ನು ಮುಚ್ಚಿಸುವಂತೆ ಇಲಾಖೆಯವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪಕ್ಷಿಪ್ರೇಮಿಗಳು.

ADVERTISEMENT

’ಪಟ್ಟಣದಿಂದ ಕೆಚ್ಚಿನಬಂಡಿ, ಹಂಪಾಪಟ್ಟಣ, ರಾಯರಾಳ ತಾಂಡ, ಹಲಗಾಪುರ, ಮಗಿಮಾವಿನಹಳ್ಳಿ ರಸ್ತೆಯಲ್ಲಿ ಹಗಲಲ್ಲಿ ಮಾತ್ರ ಪ್ರಯಾಣಿಸುವುವದು ಒಳಿತು, ರಾತ್ರಿ ಸಮಯದಲ್ಲಿ ದ್ವಿಚಕ್ರವಾಹನ ಸವಾರರು ಪ್ರಯಾಣಿಸಿದರೆ ಅವಘಡಗಳು ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಹಂಪಾಪಟ್ಟಣದ ನಾಗರಾಜ.

‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’

ತಾಲ್ಲೂಕಿನಲ್ಲಿ ಒಟ್ಟು ನೂರಾರು ಕಿ.ಮೀ.ರಸ್ತೆ ವ್ಯಾಪ್ತಿಯ ದುರಸ್ತಿ ಆಗಬೇಕಿದೆ. ಸಂಪೂರ್ಣ ಹದೆಗೆಟ್ಟಿರುವ ಎಲ್ಲ ರಸ್ತೆಗಳನ್ನು ಸಮಗ್ರ ದುರಸ್ತಿಗೊಳಿಸುವ ಅಗತ್ಯ ಇದೆ. ನೂರಾರು ಕೋಟಿ ರೂಪಾಯಿ ಅನುದಾನ ಅಗತ್ಯ ಇದೆ, ಆದರೆ ಕೇವಲ 10ಕೋಟಿ ರೂಪಾಯಿ ಕಾಮಗಾರಿ ಆರಂಭಗೊಳ್ಳುತ್ತಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ.

ಆದರೆ, ಪಿಂಜಾರ್ ಹೆಗ್ಡಾಳ್ ಗ್ರಾಮದಿಂದ ಪೌಲ್ಟ್ರೀ ಪಾರಂ ವರೆಗೂ ಮತ್ತು ಹೊಸ ಆನಂದೇವನಹಳ್ಳಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯವರೆಗೂ ತಲಾ ₹1.5ಕೋಟಿ ಮತ್ತು ಪಟ್ಟಣದಿಂದ ಕೆಚ್ಚಿನಬಂಡಿ ರಸ್ತೆಯ 3ಕಿ.ಮೀ ₹1.65ಕೋಟಿ  ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಂಜನಿಯರ್‌ಗಳು.

ಈ ವರ್ಷದಲ್ಲಿ ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗಿಲ್ಲ. ಹಳೇ ಅನುದಾನ ಈಗ ಟೆಂಡರ್ ಕರೆಯಲಾಗಿದೆ. ವರಲಹಳ್ಳಿಯಿಂದ ವಲ್ಲಭಾಪುರಕ್ಕೆ 1.5ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುವುದು.

-ಕೆ.ಎಸ್.ಸತೀಶ್‍ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ



ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಖ್ಯಾತ ಅಂಕಸಮುದ್ರ ಪಕ್ಷಿಧಾಮವಿದೆ, ಇಲ್ಲಿಗೆ ತೆರಳುವುದಕ್ಕೆ ರಾಜ್ಯ ಹೆದ್ದಾರಿಯಿಂದ ಉತ್ತಮ ರಸ್ತೆ ಅಭಿವೃದ್ಧಿ ಪಡಿಸಬೇಕು, ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ ರಸ್ತೆ ಶೀಘ್ರ ದುರಸ್ತಿಗೊಳಿಸಬೇಕು.

- ಮೇಘರಾಜ ಒಂಟಿ, ಬಾಚಿಗೊಂಡನಹಳ್ಳಿ.

ಹಗರಿಬೊಮ್ಮನಹಳ್ಳಿಯಿಂದ ಹೂವಿನಹಡಗಲಿಗೆ ತೆರಳುವುದು ಸಾಹಸದ ಪ್ರಯಾಣವಾಗಿದೆ, ಮೋರಿಗೇರಿಯವರೆಗೂ ರಸ್ತೆ ಪಾಡು ಹೇಳತೀರದು, ದ್ವಿಚಕ್ರವಾಹನ ಇದ್ದರೂ ಹೋಗದಂಥಹ ಪರಿಸ್ಥಿತಿ, ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.

-ಪಿ.ವೆಂಕಟೇಶ್, ಜವಳಿವರ್ತಕ, ಹಗರಿಬೊಮ್ಮನಹಳ್ಳಿ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೂಲಕ ಹಾದುಹೋಗಿರುವ ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ದುರಸ್ತಿಗೊಳಿಸುವುದಕ್ಕೆ ಸರ್ಕಾರ ಕೂಡಲೇ ಮುಂದಾಗಬೇಕು, ಈ ರಸ್ತೆಯಲ್ಲಿ ಹಲವಾರು ಅಪಘಾತಗಳಾಗಿವೆ, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.

-ಎಚ್.ನಾಗರಾಜ, ವಿದ್ಯುತ್ ಗುತ್ತಿಗೆದಾರ, ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಬಳಿಯ ಮೈಲಾರ-ಚಳ್ಳಿಕೆರೆ ರಾಜ್ಯ ಹೆದ್ದಾರಿಯ ಸ್ಥಿತಿ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಬಳಿಯ ಮೈಲಾರ-ಚಳ್ಳಿಕೆರೆ ರಾಜ್ಯ ಹೆದ್ದಾರಿಯ ಸ್ಥಿತಿ
ಎಚ್.ನಾಗರಾಜ ವಿದ್ಯುತ್ ಗುತ್ತಿಗೆದಾರ ಹಗರಿಬೊಮ್ಮನಹಳ್ಳಿ.
ಮೇಘರಾಜ ಒಂಟಿ ಬಾಚಿಗೊಂಡನಹಳ್ಳಿ.
ಕೆ.ಎಸ್.ಸತೀಶ್‍ನಾಯ್ಕ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯೂಡಿ ಇಲಾಖೆ
- ಪಿ.ವೆಂಕಟೇಶ್ ಜವಳಿವರ್ತಕ ಹಗರಿಬೊಮ್ಮನಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.