ಹಗರಿಬೊಮ್ಮನಹಳ್ಳಿ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಮಳಿಗೆಯ ಮುಂದೆ ಬೆಳಗಿನ ಜಾವದಿಂದ ಸರತಿಯಲ್ಲಿ ನಿಂತಿದ್ದ ನೂರಾರು ರೈತರು ಯೂರಿಯಾ ರಸಗೊಬ್ಬರ ಸಿಗದಿದ್ದಾಗ ಆಕ್ರೋಶಗೊಂಡು ಕೆಲ ಕಾಲ ರಸ್ತೆ ತಡೆ ನಡೆಸಿದರು.
‘ಪ್ರತಿ ದಿನ ಯೂರಿಯಾಕ್ಕಾಗಿ ಸರತಿಯಲ್ಲಿ ನಿಲ್ಲುವುದೇ ಕೆಲಸ ಆಗಿದೆ. ಇದುವರೆಗೂ ಒಂದು ಚೀಲವೂ ದೊರೆತಿಲ್ಲ, ಈ ಕುರಿತಂತೆ ಯಾರೂ ಕ್ರಮ ವಹಿಸದ್ದರಿಂದ ಬೇಸತ್ತು ರಸ್ತೆ ತಡೆ ಮಾಡಲಾಗಿದೆ’ ಎಂದು ರೈತರು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ರೈತರೊಂದಿಗೆ ಮಾತುಕತೆ ನಡೆಸಿದರು. ಪೊಲೀಸರು ಮತ್ತು ರೈತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪಿಎಸ್ಐ ಬಸವರಾಜ ಅಡವಿಬಾವಿ ರೈತರಿಗೆ ತಿಳಿ ಹೇಳಿ ರಸ್ತೆ ತಡೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡಿದರು. ರಾಜ್ಯ ಹೆದ್ದಾರಿ ತಡೆ ಮಾಡುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ, ರಸಗೊಬ್ಬರ ವಿತರಣೆ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದಾಗ ಪರಿಸ್ಥಿತಿ ತಿಳಿಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.