ADVERTISEMENT

ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲೂ ವಿದ್ಯುತ್ ನೀಡಿ: ಬುಡ್ಡಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:13 IST
Last Updated 1 ಮಾರ್ಚ್ 2026, 2:13 IST
ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುರೇಕುಪ್ಪ ನಾಗರಾಜ ಅವರಿಗೆ ಹಂಪಾಪಟ್ಟಣ ಗ್ರಾಮದ ರೈತ ಮುಖಂಡರು ಮನವಿ ಸಲ್ಲಿಸಿದರು
ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುರೇಕುಪ್ಪ ನಾಗರಾಜ ಅವರಿಗೆ ಹಂಪಾಪಟ್ಟಣ ಗ್ರಾಮದ ರೈತ ಮುಖಂಡರು ಮನವಿ ಸಲ್ಲಿಸಿದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಾಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹಗಲು ಸಮಯದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಗ್ರಾಮದ ರೈತ ಮುಖಂಡರು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಕೃಷಿ ಭೂಮಿಗಾಗಿ ನಾವು’ ಸಂಘಟನೆಯ ಸಂಚಾಲಕ ಬುಡ್ಡಿ ಬಸವರಾಜ ಮಾತನಾಡಿ, ಕೃಷಿ ಪಂಪ್‍ಸೆಟ್‍ಗಳಿಗೆ ಸಂಜೆ 5ರಿಂದ ರಾತ್ರಿ 12ರವರೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಚಿರತೆ, ಕರಡಿ ಸೇರಿದಂತೆ ಕಾಡು ಪ್ರಾಣಿಗಳು, ಹಾವುಗಳು ಕಾಣಿಸಿಕೊಳ್ಳುತ್ತಿವೆ, ಕೆಲವರ ಮೇಲೆ ಮಾರಣಾಂತಿಕ ದಾಳಿ ನಡೆಸಿವೆ, ಇದರಿಂದಾಗಿ ರೈತರು ಭಯದಲ್ಲಿಯೇ ನೀರು ಹರಿಸಬೇಕಿದೆ. ಆದ್ದರಿಂದ ಈ ಸಮಯವನ್ನು ಪರಿಷ್ಕರಿಸಿ ಹಗಲು ಸಮಯದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಕೆಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡ ಸೀಗೇನಹಳ್ಳಿ ಬಸವರಾಜ ಮಾತನಾಡಿ, ರಾತ್ರಿ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ, ಬೇಸಿಗೆ ಆಗಿರುವುದರಿಂದ ಹಾವುಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ರೈತರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನೀರು ಹರಿಸುತ್ತಿದ್ದಾರೆ, ಕತ್ತಲಲ್ಲಿ ಸಂಭವಿಸುವ ಅವಘಡಗಳಿಂದ ಪಾರು ಮಾಡಲು ಹಗಲು ಸಮಯದಲ್ಲಿ ವಿದ್ಯುತ್ ನೀಡಬೇಕು ಎಂದರು.

ADVERTISEMENT

ರೈತ ಮುಖಂಡರಾದ ಗೂಳಿ ಕೊಟ್ರೇಶ್, ಬಂಟರ ಕುಬೇರ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಖಾಜಾ ಸಾಹೇಬ್, ಪಿಕೆಪಿಎಸ್ ಅಧ್ಯಕ್ಷ ಕೆ.ಹುಲುಗಪ್ಪ, ಬಂಟರ ಸೋಮಣ್ಣ, ಎ.ಕೇಶವಮೂರ್ತಿ, ಟಿ.ನಾಗೇಶ್, ದಾದಾಪೀರ್, ಕರಿಬಸವನಘಡ, ತಿಪ್ಪೇಗುಂಡಿ ಗೋಣೆಪ್ಪ, ಸ್ವಾಮಿ ಇದ್ದರು. ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುರೇಕುಪ್ಪ ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.