ADVERTISEMENT

‘ಹಂಪಿ ಉತ್ಸವ’ಕ್ಕೆ ಭರ್ಜರಿ ಸಿದ್ಧತೆ

ಬದಲಾಗುತ್ತಿದೆ ಹಂಪಿ ಸಂಪರ್ಕ ರಸ್ತೆಯ ಚಹರೆ; ಸದ್ದಿಲ್ಲದೆ ನಡೆದಿದೆ ಅಭಿವೃದ್ಧಿ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಡಿಸೆಂಬರ್ 2019, 19:30 IST
Last Updated 27 ಡಿಸೆಂಬರ್ 2019, 19:30 IST
ಹಂಪಿಗೆ ಸಂಪರ್ಕ ಕಲ್ಪಿಸುವ  ಹೊಸಪೇಟೆ ತಾಲ್ಲೂಕಿನ ಕಡ್ಡಿರಾಂಪುರ ರಸ್ತೆಯನ್ನು ವಿಸ್ತರಿಸಿ, ಅಭಿವೃದ್ಧಿ ಪಡಿಸುತ್ತಿರುವುದು
ಹಂಪಿಗೆ ಸಂಪರ್ಕ ಕಲ್ಪಿಸುವ  ಹೊಸಪೇಟೆ ತಾಲ್ಲೂಕಿನ ಕಡ್ಡಿರಾಂಪುರ ರಸ್ತೆಯನ್ನು ವಿಸ್ತರಿಸಿ, ಅಭಿವೃದ್ಧಿ ಪಡಿಸುತ್ತಿರುವುದು   

ಹೊಸಪೇಟೆ: ‘ಹಂಪಿ ಉತ್ಸವ’ಕ್ಕೆ ಕೆಲವೇ ದಿನಗಳು ಉಳಿದಿರುವುದರಿಂದ ಜಿಲ್ಲಾ ಆಡಳಿತದಿಂದ ಭರ್ಜರಿ ಸಿದ್ಧತೆ ನಡೆದಿದೆ.

ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿಯಿಂದ ಸಂಪೂರ್ಣ ಹಾಳಾಗಿದ್ದ ಹೊಸಪೇಟೆ–ಕಂಪ್ಲಿ ಮುಖ್ಯರಸ್ತೆಯ ಅಭಿವೃದ್ಧಿ ಕೆಲಸ ಭರದಿಂದ ನಡೆದಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ. ಈ ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದು, ವಾಹನ ಸಂಚಾರ ದುಸ್ತರವಾಗಿತ್ತು. ಅದರ ಬಗ್ಗೆ ವ್ಯಾಪಕ ಟೀಕೆ, ಹೋರಾಟಗಳು ನಡೆದಿದ್ದವು. ಈ ಕುರಿತು ‘ಪ್ರಜಾವಾಣಿ’ ಕೂಡ ಬೆಳಕು ಚೆಲ್ಲುವ ಕೆಲಸ ಮಾಡಿತ್ತು.

ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿದೆ. ಮುಖ್ಯರಸ್ತೆಯೊಂದೆ ಅಲ್ಲ, ಹಂಪಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಕಡ್ಡಿರಾಂಪುರದ ವರೆಗಿನ ರಸ್ತೆಯೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆ ಬಹಳ ಕಿರಿದಾಗಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಜತೆಗೆ ಅಲ್ಲಲ್ಲಿ ಗುಂಡಿಗಳು ಸಹ ಬಿದ್ದಿದ್ದವು. ಅದರಲ್ಲೂ ‘ಹಂಪಿ ಉತ್ಸವ’ದಲ್ಲಿ ವಾಹನ ದಟ್ಟಣೆ ಉಂಟಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಅದನ್ನೆಲ್ಲ ಮನಗಂಡಿರುವ ಜಿಲ್ಲಾ ಆಡಳಿತವು ಈ ರಸ್ತೆ ವಿಸ್ತರಣೆ ಮಾಡಿ, ಅಭಿವೃದ್ಧಿ ಪಡಿಸುತ್ತಿದೆ.

ADVERTISEMENT

ಎರಡು ತಿಂಗಳ ಹಿಂದೆಯೇ ಕೆಲಸ ಆರಂಭಗೊಂಡಿದೆ. ಬೇರೆ ಕಡೆಗಳಿಂದ ಮಣ್ಣು ತಂದು, ಅದನ್ನು ಸುರಿದು ರೋಲರ್‌ ಮೂಲಕ ಈಗಾಗಲೇ ಸಮತಟ್ಟುಗೊಳಿಸಲಾಗಿದ್ದು, ಅದರ ಮೇಲೆ ಜಲ್ಲಿ, ಕಾಂಕ್ರೀಟ್‌ ಹಾಕುವ ಕೆಲಸ ಸದ್ಯ ನಡೆಯುತ್ತಿದೆ. ಉತ್ಸವಕ್ಕೂ ಮುಂಚೆ ಡಾಂಬರ್‌ ಹಾಕುವ ಕೆಲಸ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇನ್ನೊಂದೆಡೆ ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದಿನಂತೆ ಕಡ್ಡಿರಾಂಪುರ, ಕಮಲಾಪುರದ ಬಳಿ ಪಾರ್ಕಿಂಗ್‌ಗೆ ಜಾಗ ಗುರುತಿಸಲಾಗಿದ್ದು, ಮುಳ್ಳು, ಕಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲ, ಹಂಪಿಗೆ ಸಂಪರ್ಕ ಕಲ್ಪಿಸುವ ಎರಡೂ ಮಾರ್ಗಗಳಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದು ನಿಂತಿದ್ದ, ಗಿಡ, ಗಂಟಿಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಲಾಗುತ್ತಿದೆ.

ರಥಬೀದಿ, ಸಾಸಿವೆಕಾಳು ಗಣಪ, ಎಂ.ಪಿ. ಪ್ರಕಾಶ್‌ ನಗರ ಸೇರಿದಂತೆ ಇತರೆಡೆ ಕೆಟ್ಟು ಹೋಗಿದ್ದ ವಿದ್ಯುದ್ದೀಪಗಳನ್ನು ತೆಗೆದು ಅವುಗಳ ಜಾಗದಲ್ಲಿ ಹೊಸದನ್ನು ಅಳವಡಿಸಲಾಗುತ್ತಿದೆ. ಇಡೀ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.