ADVERTISEMENT

ಮತ್ತೆ 2 ತಿಂಗಳಿಂದ ಸಂಬಳ ಇಲ್ಲ: ಹಂಪಿ ಕನ್ನಡ ವಿ.ವಿ ಹೊರಗುತ್ತಿಗೆ ಕಾರ್ಮಿಕರ ಗೋಳು

ಎಂ.ಜಿ.ಬಾಲಕೃಷ್ಣ
Published 14 ಸೆಪ್ಟೆಂಬರ್ 2025, 5:59 IST
Last Updated 14 ಸೆಪ್ಟೆಂಬರ್ 2025, 5:59 IST
<div class="paragraphs"><p>ಹಂಪಿ ಕನ್ನಡ ವಿಶ್ವವಿದ್ಯಾಲಯ</p></div>

ಹಂಪಿ ಕನ್ನಡ ವಿಶ್ವವಿದ್ಯಾಲಯ

   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ 48 ಮಂದಿ ಹೊರಗುತ್ತಿಗೆ ನೌಕರರಿಗೆ 11 ತಿಂಗಳಿನಿಂದ ಸಂಬಳ ಕೊಡದೆ ಇರುವುದನ್ನು ವಿರೋಧಿಸಿ ಜುಲೈನಲ್ಲಿ ನಡೆಸಿದ್ದ ಪ್ರತಿಭಟನೆಯ ಬಳಿಕ ಒಂದು ತಿಂಗಳ ಸಂಬಳ ಸಿಕ್ಕಿತ್ತು. ಇದೀಗ ಮತ್ತೆ ಎರಡು ತಿಂಗಳಿಂದ ಸಂಬಳ ಇಲ್ಲವಾಗಿದೆ.

ಈ ನೌಕರರಿಗೆ 2024 ಮೇ ತಿಂಗಳಿಂದಲೇ ಸಂಬಳ ಸಿಗುವುದು ಬಾಕಿ ಇದೆ. 16 ತಿಂಗಳ ಪೈಕಿ ನಾಲ್ಕು ತಿಂಗಳ ಸಂಬಳ ಮಾತ್ರ ನೌಕರರ ಕೈಸೇರಿದೆ. ದಸರಾ ಹಬ್ಬ ಸಮೀಪಿಸಿದರೂ ದುಡಿದ ಕೈಗೆ ಒಂದಿಷ್ಟು ಸಂಬಳ ಸಿಗದೆ ಕಣ್ಣೀರಲ್ಲೇ ಕೈತೊಳೆಯಬೇಕಾದ ಸ್ಥಿತಿ ಎದುರಾಗಿದೆ.

ADVERTISEMENT

ಜುಲೈ 8ರಂದು ದಲಿತ ಹಕ್ಕುಗಳ ಸಮಿತಿಯ (ಡಿಎಚ್‌ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ಮತ್ತೆ ಅವರೇ ನೌಕರರನ್ನು ಕೆಲಸಕ್ಕೆ ನಿಯೋಜಿಸಲು ಹೊರಗುತ್ತಿಗೆ ಪಡೆದಿರುವ ಕಲಬುರ್ಗಿಯ ಕೌಶಲ್ಯ ಸೆಕ್ಯುರಿಟಿ ಸರ್ವೀಸ್‌ನವರಿಗೆ ಪತ್ರ ಬರೆದು ನೌಕರರ ಗೋಳು ಪರಿಹರಿಸುವಂತೆ ಸೂಚನೆ ನೀಡಿದ್ದಾರೆ.

‘ನೀವು 16 ತಿಂಗಳಲ್ಲಿ ಕೇವಲ ನಾಲ್ಕು ತಿಂಗಳು ಮಾತ್ರ ಸಂಬಳ ಪಾವತಿ ಮಾಡಿದ್ದೀರಿ, ಇನ್ನುಳಿದ 12 ತಿಂಗಳ ಸಂಬಳ ಪಾವತಿಗಾಗಿ ತಕ್ಷಣ ವ್ಯವಸ್ಥೆ ಮಾಡಬೇಕು. ನಿಮ್ಮ ಈ ನೀತಿಯ ಕಾರಣಕ್ಕಾಗಿ ದಲಿತ ಹೊರಗುತ್ತಿಗೆ ನೌಕರನಾದ ನಾಯಕರ ನಂದೀಶ್ ಪ್ರಾಣ ಕಳೆದುಕೊಂಡ. ಆತನ ಇಡೀ ಕುಟುಂಬ ಇಂದು ಬೀದಿಗೆ ಬಿದ್ದಿದೆ. ಒಂದು ವರ್ಷದ ಸಂಬಳ ಇಲ್ಲದೆ, ಹೊರಗುತ್ತಿಗೆ ನೌಕರರು ಬದುಕುವುದಾದರೂ ಹೇಗೆ? ದಸರಾ ಹಬ್ಬ ಬರುತ್ತಿದೆ. ನೌಕರರು ಕಂಡ ಕಂಡಲ್ಲಿ ಸಾಲ ಮಾಡಿದ್ದಾರೆ. ಸಾಲಗಾರರ ಒತ್ತಡಕ್ಕೆ, ತಲೆ ಎತ್ತಿ ಓಡಾಡಲು ನೌಕರರಿಗೆ ಸಾಧ್ಯ ಆಗುತ್ತಿಲ್ಲ. ಇಲ್ಲಿನ ಬಹುತೇಕ ನೌಕರರು ತುಂಬಾ ಬಡವರು. ಎಸ್ ಸಿ, ಎಸ್ ಟಿ, ಹಿಂದುಳಿದ ಸಮಾಜಗಳಿಗೆ ಸೇರಿದವರು. ಒಂದು ವಾರದೊಳಗೆ ನೀವು ಮತ್ತು ಕನ್ನಡ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸಂಬಳ ಪಾವತಿಗಾಗಿ ವ್ಯವಸ್ಥೆ ಮಾಡಬೇಕು’ ಎಂದು ಪತ್ರದಲ್ಲಿ ತಾಕೀತು ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಕುಲಪತಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

‘ವಿ.ವಿ. ಗೌರವ ಕಳೆಯುವ ಮನಸ್ಸಿಲ್ಲ’

‘ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ಅಸ್ಮಿತೆ, ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ಹೋರಾಡಿದವರಲ್ಲಿ ನಾನು ಸಹ ಸೇರಿದ್ದೆ. ಇಂತಹ ವಿಶ್ವವಿದ್ಯಾಲಯ ಇದೀಗ ಹಲವು ಕಾರಣಗಳಿಂದ ಅವನತಿಯತ್ತ ತೆರಳುತ್ತಿದ್ದು, ಬಡಪಾಯಿ ನೌಕರರಿಗೆ ಸಂಬಳ ನೀಡುವ ಸ್ಥಿತಿಯಲ್ಲೇ ಇಲ್ಲ. ವಿಶ್ವವಿದ್ಯಾಲಯದ ಗೌರವ ಕಳೆಯುವ ಮನಸ್ಸಿಲ್ಲ, ಆದರೆ ನೌಕರರ ಸ್ಥಿತಿ ನೋಡಿ ಅನಿವಾರ್ಯವಾಗಿ ಈ ಪತ್ರ ಬರೆಯಬೇಕಾಯಿತು’ ಎಂದು ಜಂಬಯ್ಯ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.