ADVERTISEMENT

ಹಂಪಿ ಕನ್ನಡ ವಿ.ವಿಯಲ್ಲಿ ಮೀಸಲು ನೀತಿಗೆ ವಿರುದ್ಧ ಬೋಧಕ ಹುದ್ದೆ ನೇಮಕದ ಆರೋಪ

ಅಧಿಸೂಚನೆ ಹಿಂಪಡೆಯಲು ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 9:39 IST
Last Updated 20 ಸೆಪ್ಟೆಂಬರ್ 2021, 9:39 IST
ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಮುಖಂಡರು ಸೋಮವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು
ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಮುಖಂಡರು ಸೋಮವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯವು ಬೋಧಕ ಹುದ್ದೆಗಳ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯು ಮೀಸಲಾತಿ ನಿಯಮಕ್ಕೆ ವಿರುದ್ಧವಾಗಿದ್ದು, ಅಸಾಂವಿಧಾನಿಕವಾಗಿದೆ ಎಂದು ಆರೋಪಿಸಿರುವ ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘ, ಕೂಡಲೇ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿದೆ.

ಈ ಸಂಬಂಧ ಸಂಘದ ಜಿಲ್ಲಾ ಅಧ್ಯಕ್ಷ ವಾಸುದೇವ್‌, ಕಾರ್ಯದರ್ಶಿ ಸೋಮಶೇಖರ್‌ ಬಣ್ಣದಮನೆ, ತಾಲ್ಲೂಕು ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ತಾಲ್ಲೂಕು ಪ್ರಗತಿಪರ ಸಂಘಟನೆ ಸಂಚಾಲಕ ದುರುಗಪ್ಪ ಪೂಜಾರಿ ಸೋಮವಾರ ಕುಲಪತಿ ಪ್ರೊ. ಸ.ಚಿ. ರಮೇಶ ಅವರನ್ನು ಖುದ್ದು ಭೇಟಿಯಾಗಿ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

‘ಅಧಿಸೂಚನೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಮೀಸಲಾತಿ ಆದೇಶ ಗಾಳಿಗೆ ತೂರಿದೆ. ಒಟ್ಟು 17 ಹುದ್ದೆಗಳಲ್ಲಿ 1 ಹುದ್ದೆ ಪರಿಶಿಷ್ಟ ಜಾತಿಯ ಅಂಗವಿಕಲರಿಗೆ ಮೀಸಲಿಡಲಾಗಿದೆ. ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಹುದ್ದೆಗೆ ಸಾಮಾನ್ಯ ವರ್ಗದ ಒಂದು ಹುದ್ದೆ ಮಹಿಳೆಗೆ ಮೀಸಲಿಡಲಾಗಿದೆ. 371(ಜೆ) ಅಡಿಯಲ್ಲಿ ಈಗಾಗಲೇ ಒಬ್ಬರನ್ನು ನೇಮಕ ಮಾಡಲಾಗಿದೆ. ಆದರೆ, ಅದೇ ವಿಭಾಗಕ್ಕೆ ಪುನಃ ಒಂದು ಹುದ್ದೆ ಕಾಯ್ದಿರಿಸಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ’ ಎಂದು ಟೀಕಿಸಿದರು.

ADVERTISEMENT

‘ಅಧಿಸೂಚನೆಯಲ್ಲಿ ಆಗಿರುವ ಲೋಪ ಸರಿಪಡಿಸಿ ಸಾಮಾಜಿಕ ನ್ಯಾಯದ ಪ್ರಕಾರ, ಮೀಸಲಾತಿಯ ನಿಯಮಕ್ಕೆ ಅನುಗುಣವಾಗಿ ಹೊಸ ಅಧಿಸೂಚನೆ ಹೊರಡಿಸಬೇಕು. ಪರಿಶಿಷ್ಟರು ಸೇರಿದಂತೆ ಹಿಂದುಳಿದ ವರ್ಗದ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.