ADVERTISEMENT

ಹಂಪಿ ಸ್ಮಾರಕಗಳು ಜಲಾವೃತ, 10 ಗ್ರಾಮಕ್ಕೆ ಮುಳುಗಡೆ ಭೀತಿ

ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 13:17 IST
Last Updated 11 ಆಗಸ್ಟ್ 2019, 13:17 IST
   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಮೂರು ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದ್ದು, ತಾಲ್ಲೂಕಿನ ಹಂಪಿ ಸ್ಮಾರಕಗಳು ಜಲಾವೃತವಾಗಿವೆ.

ಹಂಪಿಯ ಚಕ್ರತೀರ್ಥ, ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ವಿಜಯ ವಿಠಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ತಳವಾರಘಟ್ಟ ರಸ್ತೆ ಮೇಲೆ ನೀರು ಬಂದಿರುವುದರಿಂದ ಪ್ರವಾಸಿಗರ ವಾಹನಗಳು ಸಿಲುಕಿಕೊಂಡು ಜನ ಪರದಾಡಿದರು. ಜನರನ್ನು ಚಕ್ಕಡಿಗಳಲ್ಲಿ ಬೇರೆ ಕಡೆ ಸ್ಥಳಾಂತರಿಸಲಾಯಿತು. ಹಂಪಿಗೆ ಹೊಂದಿಕೊಂಡಂತಿರುವ ಬಾಳೆತೋಟಗಳಿಗೆ ನೀರು ನುಗ್ಗಿದ್ದು, ಇನ್ನಷ್ಟೇ ಹಾನಿಯ ಪ್ರಮಾಣ ಗೊತ್ತಾಗಬೇಕಿದೆ.

ಹೊಸಪೇಟೆ ಮತ್ತು ಕಂಪ್ಲಿ ತಾಲ್ಲೂಕಿನ ತಲಾ ಐದು ಗ್ರಾಮಗಳಿಗೆ ನೀರು ನುಗ್ಗಿದ್ದು, ಮುಳುಗಡೆ ಭೀತಿ ಎದುರಿಸುತ್ತಿವೆ. ಕಂಪ್ಲಿ–ಗಂಗಾವತಿ ಸೇತುವೆ ಮೇಲೆ ಅಪಾರ ನೀರು ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ.

ADVERTISEMENT

ಹೂವಿನಹಡಗಲಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 200 ಹೆಕ್ಟೇರ್‌ ಪ್ರದೇಶದ ಕೃಷಿ ಜಮೀನಿನಲ್ಲಿ ನೀರು ಆವರಿಸಿಕೊಂಡಿದೆ.

ಒಟ್ಟು 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,631 ಅಡಿ ನೀರು ಸಂಗ್ರಹವಾಗಿದ್ದು, 2.50 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಸೇತುವೆ ಸಂಪೂರ್ಣ ಭರ್ತಿಯಾಗಲು ಎರಡು ಅಡಿಗಳಷ್ಟೇ ಉಳಿದಿರುವುದರಿಂದ ನೀರು ಹೊರ‌ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.