ADVERTISEMENT

ಹಂಪಿಯಲ್ಲಿ ಸಂಭ್ರಮದ ತೆಪ್ಪೋತ್ಸವ

ಸ್ಥಳೀಯರು ಸೇರಿದಂತೆ ವಿದೇಶಿಯರು ಕಾರ್ಯಕ್ರಮಕ್ಕೆ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:42 IST
Last Updated 13 ಡಿಸೆಂಬರ್ 2019, 8:42 IST
ಹಂಪಿ ಮನ್ಮಥ ತೀರ್ಥದಲ್ಲಿ ಗುರುವಾರ ರಾತ್ರಿ ನಡೆದ ತೆಪ್ಪೋತ್ಸವಕ್ಕೆ ನೂರಾರು ಜನ ಸಾಕ್ಷಿಯಾದರು
ಹಂಪಿ ಮನ್ಮಥ ತೀರ್ಥದಲ್ಲಿ ಗುರುವಾರ ರಾತ್ರಿ ನಡೆದ ತೆಪ್ಪೋತ್ಸವಕ್ಕೆ ನೂರಾರು ಜನ ಸಾಕ್ಷಿಯಾದರು   

(ಹಂಪಿ) ಹೊಸಪೇಟೆ: ಫಲಪೂಜಾ ಮಹೋತ್ಸವದ ಪ್ರಯುಕ್ತ ತಾಲ್ಲೂಕಿನ ಹಂಪಿ ಮನ್ಮಥ ತೀರ್ಥದಲ್ಲಿ ಗುರುವಾರ ರಾತ್ರಿ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದ ಮಧ್ಯೆ ತೆಪ್ಪೋತ್ಸವ ನೆರವೇರಿತು.

ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿರೂಪಾಕ್ಷ ಹಾಗೂ ಪಂಪಾಂಬಿಕೆಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಪೂಜೆ ನೆರವೇರಿಸಿದರು. ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮನ್ಮಥ ತೀರ್ಥದ ವರೆಗೆ ಮೆರವಣಿಗೆಯಲ್ಲಿ ತರಲಾಯಿತು. ದೇಗುಲದ ಆನೆ ಲಕ್ಷ್ಮಿ ರಾಜಗಾಂಭೀರ್ಯದಿಂದ ಮುಂದೆ ಹೆಜ್ಜೆ ಹಾಕಿದರೆ, ಅದರ ಹಿಂಭಾಗದಲ್ಲಿ ಮಂತ್ರಘೋಷ, ನಾದಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರೆಸಲಾಯಿತು.

ತಳಿರು ತೋರಣ, ವಿದ್ಯುದ್ದೀಪಗಳಿಂದ ಅಲಂಕರಿಸಿದ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮತ್ತೊಮ್ಮೆ ಪೂಜೆ ನೆರವೇರಿಸಲಾಯಿತು. ಬಳಿಕ ಮಂತ್ರ ಘೋಷಗಳ ನಡುವೆ ಪುಷ್ಕರಿಣಿಯಲ್ಲಿ ಸುತ್ತು ಹಾಕಲಾಯಿತು. ಈ ಕ್ಷಣಕ್ಕೆ ಸ್ಥಳೀಯರು ಸೇರಿದಂತೆ ವಿದೇಶಿಯರು ಸಾಕ್ಷಿಯಾದರು.

ADVERTISEMENT

ಮೈಕೊರೆಯುವ ಚಳಿಯಲ್ಲೇ ಜನ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಇದಕ್ಕೂ ಮುನ್ನ ದೇಗುಲದ ಆವರಣದಲ್ಲಿ ಭಕ್ತರು ದೀಪ ಬೆಳಗಿಸಿ ಹರಕೆ ತೀರಿಸಿದರು. ಬಳಿಕ ಬೆಂಗಳೂರಿನ ಕಲಾಸಿಂಧೂ ನೃತ್ಯ ತಂಡದವರು ಸಮೂಹ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ಇದ್ದರು. ಶುಕ್ರವಾರ (ಡಿ.13) ಬೆಳಿಗ್ಗೆ ವಿರೂಪಾಕ್ಷನಿಗೆ ವಿಜಯನಗರ ಅರಸರ ಕಾಲದ ನವರತ್ನ ಖಚಿತವಾದ ಚಿನ್ನದ ಮುಕುಟ ತೊಡಿಸಿ, ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.