ADVERTISEMENT

ಅಂಜನಾದ್ರಿ ಕಡೆಗೆ ಕೇಸರಿಧಾರಿಗಳು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 12:52 IST
Last Updated 20 ಡಿಸೆಂಬರ್ 2018, 12:52 IST
ಹೊಸಪೇಟೆಯಿಂದ ಅಂಜನಾದ್ರಿ ಬೆಟ್ಟದ ಕಡೆಗೆ ಗುರುವಾರ ಹೆಜ್ಜೆ ಹಾಕಿದ ಹನುಮ ಮಾಲಾಧಾರಿಗಳು–ಪ್ರಜಾವಾಣಿ ಚಿತ್ರ
ಹೊಸಪೇಟೆಯಿಂದ ಅಂಜನಾದ್ರಿ ಬೆಟ್ಟದ ಕಡೆಗೆ ಗುರುವಾರ ಹೆಜ್ಜೆ ಹಾಕಿದ ಹನುಮ ಮಾಲಾಧಾರಿಗಳು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ವ್ರತ ಕೈಗೊಂಡಿರುವ ಹನುಮ ಮಾಲಾಧಾರಿಗಳು ಗುರುವಾರ ತಾಲ್ಲೂಕಿನ ಹಂಪಿ ಸಮೀಪದ ಅಂಜನಾದ್ರಿ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದರು.

ಬುಧವಾರ ರಾತ್ರಿ ನಗರದಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಹನುಮ ಮಾಲಾಧಾರಿಗಳು, ಬೆಳಿಗ್ಗೆ ಇಲ್ಲಿನ ವಡಕರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಇಡಿಗಾಯ ಒಡೆದು ದರ್ಶನ ಪಡೆದರು. ನಂತರ ತಂಡೋಪ ತಂಡವಾಗಿ ಕೇಸರಿ ಧ್ವಜಗಳೊಂದಿಗೆ ಜೈ ಜೈ ರಾಮ, ಜೈ ಹನುಮಾನ ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು. ನಗರದಿಂದ ಹಂಪಿ ವರೆಗೆ ಎಲ್ಲಿ ನೋಡಿದರಲ್ಲಿ ಕೇಸರಿ ವಸ್ತ್ರ ಧರಿಸಿದ ಮಾಲಾಧಾರಿಗಳೇ ಕಂಡು ಬಂದರು.

ನಗರಸಭೆ ಸದಸ್ಯ ಡಿ. ವೇಣುಗೋಪಾಲ್‌ ಅವರು ಬಾಲಾ ಟಾಕೀಸ್‌ ಬಳಿ ಉಪಾಹಾರದ ವ್ಯವಸ್ಥೆ ಮಾಡಿದರೆ, ಇನ್ನೊಬ್ಬ ಸದಸ್ಯ ರಾಮಚಂದ್ರಗೌಡ ಕುಡಿಯುವ ನೀರಿನ ಪಾಕೆಟ್‌, ಹಣ್ಣು ವಿತರಿಸಿದರು.

ADVERTISEMENT

ಹನುಮ ಮಾಲಾ ಸಂಘಟನಾ ಸಮಿತಿ ಜಿಲ್ಲಾ ಅಧ್ಯಕ್ಷ ಗುದ್ಲಿ ಪರಶುರಾಮ ಅವರು ದಾರಿಯುದ್ದಕ್ಕೂ ಹನುಮ ಮಾಲಾಧಾರಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಗುರು ಜೈನ್‌ ಸೇವಾ ಮಂಡಳಿಯಿಂದ ತಾಲ್ಲೂಕಿನ ಕಡ್ಡಿರಾಂಪುರ ಕ್ರಾಸ್‌ ಬಳಿ ಪುಳಿಯೋಗರೆ ವಿತರಿಸಲಾಯಿತು.

ಅನಂತಶಯನಗುಡಿ, ಕಮಲಾಪುರ ಸಮೀಪ ಮುಸ್ಲಿಂ ಸಮಾಜದವರು ಹಣ್ಣು ವಿತರಿಸಿ, ಸೌಹಾರ್ದತೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.