
ಹರಪನಹಳ್ಳಿ: ‘ಮಹಿಳೆಯರನ್ನು ಶಿಕ್ಷಣದಿಂದ ದೂರವಿರಿಸಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದರು’ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ನಗರದ ತೆಗ್ಗಿನಮಠ ಸಭಾಂಗಣದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಹೋರಾಟದ ಮೂಲಕ ಎಲ್ಲ ಸಮಸ್ಯೆ ಎದುರಿಸಿದ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅಂತಹ ಮಹನೀಯರ ಹೆಸರಿನಲ್ಲಿ ಸಂಘ ಕಟ್ಟುವುದು ಮುಖ್ಯವಲ್ಲ, ಅವರ ಹೆಸರಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಸಂಘಟನೆ ನೆಪದಲ್ಲಿ ಕೆಲವು ಶಿಕ್ಷಕರು ಪಾಠ ಮಾಡುವುದಕ್ಕಿಂದ ಹೆಚ್ಚು ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಸಂಘದ ರಾಷ್ಟ್ರೀಯ ಘಟಕದ ಅಧ್ಯಕ್ಷೆ ಲತಾ ಮಳ್ಳೂರು, ಜಿಲ್ಲಾ ಘಟಕದ ಅಧ್ಯಕ್ಷೆ ಟಿ.ಎಚ್.ಎಂ. ಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಿ. ಮನೋಹರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದಿವಾಕರ ನಾರಾಯಣ ಮಾತನಾಡಿದರು.
12 ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಜಿಲ್ಲಾಮಟ್ಟದ ಪ್ರಶಸ್ತಿ ಹಾಗೂ 42 ಶಿಕ್ಷಕಿಯರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುರುಮೂರ್ತಿ, ಸಂಗಯ್ಯ ಹಿರೇಮಠ, ಎಂ. ಶರೀಫ್, ಕೆ. ಉಚ್ಚೆಂಗೆಪ್ಪ, ಮಂಜುನಾಥ ಪೂಜಾರ, ಎನ್.ಟಿ. ಸೋಮಪ್ಪ, ಬಿ. ಸೂರ್ಯನಾಯ್ಕ, ಕೆ. ಅಂಜಿನಪ್ಪ, ಕೆ. ಮರಿಯಪ್ಪ, ಗೂರಪ್ಪ ಪವಾರ್, ಗಿರಿರಾಜ ಎಲ್., ಲತಾಶ್ರೀ, ಶೋಭಾರಾಣಿ, ವಸಂತಮ್ಮ, ಶೈಲಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.