ADVERTISEMENT

ಉಚ್ಚಂಗಿದುರ್ಗ | ಭಾರತ ಹುಣ್ಣಿಮೆ ಆಚರಣೆ: ಉಚ್ಚಂಗೆಮ್ಮ ನಿನ್ಹಾಲ್ಕ ಉಧೋ, ಉಧೋ....

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:58 IST
Last Updated 2 ಫೆಬ್ರುವರಿ 2026, 1:58 IST
ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಬೆಟ್ಟದ ಮೇಲೆ ದೇವಿ ದರ್ಶನಕ್ಕೆ ಸಾಲಾಗಿ ಹೊರಟಿದ್ದ ಭಕ್ತರ ದಂಡು
ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಬೆಟ್ಟದ ಮೇಲೆ ದೇವಿ ದರ್ಶನಕ್ಕೆ ಸಾಲಾಗಿ ಹೊರಟಿದ್ದ ಭಕ್ತರ ದಂಡು   

ಹರಪನಹಳ್ಳಿ: ಭರತ ಹುಣ್ಣಿಮೆ ಆಚರಣೆ ನಿಮಿತ್ತ ಮದ್ಯ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರಸಿದ್ದ ಉಚ್ಚೆಂಗೆಮ್ಮ ದೇವಸ್ಥಾನಕ್ಕೆ ಭಾನುವಾರ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗವು ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರ ಆಚರಣೆಯಿಂದ ವೈಶಿಷ್ಠ್ಯತೆ ಪಡೆದಿದೆ. ಭರತ ಹುಣ್ಣಿಮೆ ದಿನವಾದ ಭಾನುವಾರ ಇಲ್ಲಿಗೆ ಭಕ್ತ ಸಾಗರವೇ ಹರಿದು ಬಂದಿತ್ತು.

ಕಣ್ಣು ಹಾಯಿಸಿದಷ್ಟು ದೂರ ಭಕ್ತರು ತಾಪಮಾನ ಲೆಕ್ಕಿಸದೇ ಬೆಟ್ಟ ಏರುತ್ತಿದ್ದರು, ಸುಡುತ್ತಿದ್ದ ಬಂಡೆ ಮೇಲೆ ಬರಿಗಾಲಲ್ಲಿ ನಡೆಯುತ್ತಾ ‘ಉಚ್ಚೆಂಗೆಮ್ಮ ದೇವಿ ನಿನ್ಹಾಲ್ಕ, ಉಧೋ, ಉಧೋ’ ಎಂದು ಉದ್ಘೋಷ ಮೊಳಗಿಸಿದರು.

ADVERTISEMENT

ಗ್ರಾಮದ ಮೂಲಕ 600 ಮೆಟ್ಟಿಲುಗಳಿರುವ ಬೆಟ್ಟವನ್ನು ಏರುತ್ತಿದ್ದ ಗುಂಪು ಒಂದೆಡೆಯಾದರೆ, ಕೋಟೆ ಮಾರ್ಗದಿಂದ ಹೋಗುವ ರಸ್ತೆಗಳಲ್ಲಿ ಭಕ್ತರ ದಂಡು ಜಮಾಯಿಸಿತ್ತು. ಆನೆಹೊಂಡ, ಅರಿಸಿನ ಹೊಂಡಕ್ಕೆ ಇಳಿಯದಂತೆ ನಿರ್ಬಂಧ ಹೇರಿದ್ದರಿಂದ ಅಲ್ಲಲ್ಲಿ ಕುಳಿತಿದ್ದ ಭಕ್ತ ಸಮೂಹ ಕೃತಕ ಗೃಹಗಳಲ್ಲಿ ಸ್ನಾನ ನೆರವೇರಿಸಿ ಪೂಜೆ ವಿಧಿವಿದಾನ ಪೂರೈಸಿದರು.

ಗುಂಪು ಗುಂಪಾಗಿ ದೇವಿಯ ಪ್ರತಿರೂಪವಾದ ಕೊಡಪಾನ, ಪಡ್ಲಗಿ ಕಲ್ಲುಬಂಡೆ ಮೇಲೆ ಪ್ರತಿಷ್ಟಾಪಿಸಿ, ಐದು ಜನ ಮುತ್ತೈದೆ ( ಮಾಜಿ ದೇವದಾಸಿ)ಯರನ್ನು ಆಹ್ವಾನಿಸಿ, ಅವರು ತಂದಿದ್ದ ಪಡ್ಲಗಿಯಲ್ಲಿ ಹೋಳಿಗೆ, ಅಕ್ಕಿ, ಎಲೆ, ಗಾಜಿನ ಹಸಿರು ಬಳೆ, ನಿಂಬೆ ಹಣ್ಣು, ತೆಂಗಿನಕಾಯಿ, ಹಣೆಗೆ ಕುಂಕುಮ ಲೇಪಿಸಿ ಪೂಜೆ ಸಲ್ಲಿಸಿದರು. ಬಳಿಕ ಅವರಿಗೆ ನೀರು ಚುಮುಕಿಸಿ ಬೀಳ್ಕೊಡುತ್ತಿದ್ದಾಗ ದೇವಿ ಆರಾಧನೆ ಗಮನ ಸೆಳೆಯಿತು. ಪುನರ್ವಸತಿ ಕಲ್ಪಿತ ದೇವದಾಸಿಯರು ತಮ್ಮ ಹಳೆಯ ಪಡ್ಲಿಗಿ, ಹಸಿರು ಬಳೆ ತೆಗೆದು, ಹೊಸ ಸಾಮಗ್ರಿ ಧರಿಸಿಕೊಂಡು ದೇವಿ ದರ್ಶನ ಪಡೆದರು.

‘ಕಳೆದ 40 ವರ್ಷಗಳಿಂದ ದೇವಿಯ ಕ್ಷೇತ್ರಕ್ಕೆ ಆಗಮಿಸುತ್ತಿರುವೆ. ಭಾರತ ಹುಣ್ಣಿಮೆ ದಿನ ಇಲ್ಲಿಗೆ ಬಂದು ಹೊಸ ಬಟ್ಟೆ ಧರಿಸಿ, ಪಡ್ಲಿಗಿಗೆ ಪೂಜೆ ಸಲ್ಲಿಸಿ ತೆರಳುತ್ತೇವೆ. ಇದರಿಂದ ದೇವಿ ನಮಗೆ ಹೆಚ್ಚಿನ ಶಕ್ತಿ ನೀಡುವುದು ಮತ್ತು ಮುತ್ತೈದೆಯಾಗಿ ಹೊಸತನ ಬರುತ್ತದೆ’ ಎಂದು ಮಾಜಿ ದೇವದಾಸಿ ಗಂಗಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಅಹಿತಕರ ಘಟನೆ ತಡೆಗೆ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗ ಬೆಟ್ಟದ ಅರಿಶಿಣ ಹೊಂಡದ ಬಳಿ ಜಮಾಯಿಸಿದ್ದ ಭಕ್ತರ ದಂಡು

ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಬೆಟ್ಟದ ಪ್ರದೇಶದಲ್ಲಿ ತಾತ್ಕಾಲಿಕ ಆಸ್ಪತ್ರೆ, ದೇವಸ್ಥಾನದಿಂದ ಅನ್ನ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.

ಹೆಚ್ಚುವರಿ ಎಸ್ಪಿ ಮಂಜುನಾಥ, ಡಿವೈಎಸ್ಪಿ ಸಂತೋಷ ಚೌವ್ಹಾಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಕುಮಾರಸ್ವಾಮಿ, ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಸದಸ್ಯರು, ಪೊಲೀಸ್ ಇಲಾಖೆ ಸಿಬ್ಬಂದಿ, ಧರ್ಮದಾಯ ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿ ಇದ್ದರು.

ಉಚ್ಚಂಗೆಮ್ಮ ದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.