ADVERTISEMENT

ಬಳ್ಳಾರಿ ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳ ರಂಪಾಟ

​ಪ್ರಜಾವಾಣಿ ವಾರ್ತೆ
Published 28 ಮೇ 2025, 6:52 IST
Last Updated 28 ಮೇ 2025, 6:52 IST
   

ಬಳ್ಳಾರಿ: ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಯೊಂದಿಗೆ ಇತ್ತೀಚೆಗೆ ರಂಪಾಟ ನಡೆಸಿದ್ದಾರೆ. 

ಜಿಲಾನ್‌ ಮತ್ತು ಸೈಯ್ಯದ್‌ ನಿಹಾಲ್‌ ಎಂಬುವರು ದಿನವೂ ಒಂದಿಲ್ಲೊಂದು ದೂರು ಮುಂದಿಟ್ಟು ಸಿಬ್ಬಂದಿಯೊಂದಿಗೆ ಜಗಳವಾಡುತ್ತಿದ್ದರು. ಎರಡು ದಿನಗಳ ಹಿಂದೆ ಈ ಜಗಳ ತಾರಕಕ್ಕೇರಿದ್ದು ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಗೊತ್ತಾಗಿದೆ. 

ಹರ್ಷ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಿಲಾನ್‌ ಎಂಬಾತನನ್ನು ಕಲಬುರಗಿ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಆತ ಧಾರವಾಡ ಜೈಲಿಗೆ ವರ್ಗಾವಣೆ ಮಾಡಿಕೊಂಡಿದ್ದ. ಅಲ್ಲಿನ ವ್ಯವಸ್ಥೆ ಬಗ್ಗೆಯೂ ದೂರುತ್ತಿದ್ದ ಆತ ಬೇರೆಡೆಗೆ ಸ್ಥಳಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದ. ಆದರೆ, ನ್ಯಾಯಾಲಯವು ಜಿಲಾನ್‌ನನ್ನು ಬಳ್ಳಾರಿಗೆ ವರ್ಗಾಯಿಸಿತ್ತು. ಇದು ಜಿಲಾನ್‌ಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು ಎನ್ನಲಾಗಿದೆ.  

ADVERTISEMENT

ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಸೈಯ್ಯದ್‌ ನಿಹಾಲ್‌ ಎಂಬಾತ ಅದಾಗಲೇ ಬಳ್ಳಾರಿ ಜೈಲಿನಲ್ಲಿ ಇದ್ದ. ಆತನೊಂದಿಗೆ ಜಿಲಾನ್‌ ಕೂಡ ಸೇರಿಸಿಕೊಂಡಿದ್ದ. ಇಬ್ಬರೂ ಸೇರಿ ಜೈಲು ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದರು. ಪ್ರತ್ಯೇಕವಾಗಿ ಇರಿಸದೇ, ಎಲ್ಲರೊಂದಿಗೆ ಇರಲು ಬಿಡಬೇಕು ಎಂದು ಒತ್ತಾಯಿಸುತ್ತಿದ್ದರು. ಸಾಮಾನ್ಯ ಕೈದಿಗಳಂತೆ ಇರಲು ಬಿಡಬೇಕು, ಬೇರೆ ಜೈಲಿಗೆ ವರ್ಗಾಯಿಸಬೇಕು ಎಂದು ಕೇಳುತ್ತಿದ್ದರು. ಇದನ್ನೇ ವಕೀಲರ ಮೂಲಕ ಹೇಳಿಸುತ್ತಿದ್ದರು ಎಂದು ಗೊತ್ತಾಗಿದೆ. ಜೈಲು ಆಡಳಿತ ಇದಕ್ಕೆ ಒಪ್ಪದೇ ಇದ್ದಾಗ ಇಬ್ಬರೂ ಸೇರಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.  

‘ಎರಡು ದಿನಗಳ ಹಿಂದೆ ಇಬ್ಬರೂ ತಕರಾರು ತೆಗೆದು ಗಲಾಟೆ ಮಾಡಿದ್ದಾರೆ. ಸದ್ಯ ಇಬ್ಬರಿಗೂ ಎಚ್ಚರಿಕೆ ನೀಡಿ ಪ್ರತ್ಯೇಕವಾಗಿ ಇರಿಸಲಾಗಿದೆ’ ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಶಿವಮೊಗ್ಗದ ಹರ್ಷ, ದಕ್ಷಿಣ ಕನ್ನಡದ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರನ್ನೆಲ್ಲ ಸಾಮಾನ್ಯ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.