ADVERTISEMENT

ಬಳ್ಳಾರಿ | ಸಮುದಾಯ ಆರೋಗ್ಯ ಅಧಿಕಾರಿಗಳ ಪರದಾಟ: ನಾಲ್ಕು ತಿಂಗಳಿಂದ ವೇತನವಿಲ್ಲ

ಕುಟುಂಬ ನಿರ್ವಹಣೆಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 3:05 IST
Last Updated 11 ಅಕ್ಟೋಬರ್ 2025, 3:05 IST
ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿನ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಮಂದಿರ
ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿನ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಮಂದಿರ   

ಸಂಡೂರು: ತಾಲ್ಲೂಕು ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಮಂದಿರ, ಉಪ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಸಿಕ್ಕಿಲ್ಲ. ಅವರ  ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. 

ರಾಷ್ಟ್ರೀಯ ಆರೋಗ್ಯ ಅಭಿಯಾನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ 4,501 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 78, ಸಂಡೂರು ತಾಲ್ಲೂಕಿನಲ್ಲಿ 25 ಜನ ಸಮುದಾಯ ಆರೋಗ್ಯ ಅಧಿಕಾರಿಗಳು ಸುಮಾರು ಐದಾರು ವರ್ಷಗಳಿಂದ ಕಡಿಮೆ ವೇತನಕ್ಕೆ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿನ ಬಡ ಜನರ ಆರೋಗ್ಯ ಸೇವೆಯ ಉದ್ದೇಶಕ್ಕಾಗಿ ಈ ಕೇಂದ್ರಗಳನ್ನು ತೆರೆಯಲಾಗಿದ್ದು, ಹೆರಿಗೆ, ನಂತರದ ಸೇವೆಗಳು, ಶಿಶು, ಬಾಲ್ಯ, ಹದಿಹರೆಯದವರ ಆರೋಗ್ಯ ಸೇವೆಗಳು, ಮಾನಸಿಕ ಆರೋಗ್ಯ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳು, ಕುಟುಂಬ ಯೋಜನೆ ಸೇರಿದಂತೆ ಇತರೆ ಆರೋಗ್ಯ ಸೇವೆಗಳು ಉಪ ಕೇಂದ್ರಗಳಲ್ಲಿ ದೊರೆಯುತ್ತಿವೆ. 

ADVERTISEMENT

‘ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಮಂದಿರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸರ್ಕಾರದಿಂದ ವಸತಿ ಸೌಲಭ್ಯ, ಇಪಿಎಫ್, ಇಎಸ್‍ಐ, ಜೀವ ವಿಮೆ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳನ್ನು, ಕಾಯಂ ನೌಕರರಿಗೆ ನೀಡುವ ಶೇ50ರಷ್ಟು ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಹಲವಾರು ಮನವಿ ಸಲ್ಲಿಸಲಾಗಿದೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಗುತ್ತಿಗೆ ನೌಕರರು ಸರ್ಕಾರದ ವಿರುದ್ಧ ಅಸಾಮಾಧಾನಗೊಂಡಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ಆರೋಗ್ಯ ಸೇವೆ ಸಲ್ಲಿಸುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರವು ಶೀಘ್ರವಾಗಿ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುವ ಗುತ್ತಿಗೆ ನೌಕರನ್ನು ಸರ್ಕಾರವು ಕಾಯಂ ಮಾಡಬೇಕು. ಕಾಯಂ ಸಿಬ್ಬಂದಿಗೆ ನೀಡುವ ಸೌಲಭ್ಯಗಳನ್ನು ನಮಗೆ ನೀಡಬೇಕು’ ಎಂದು ಹೆಸರು ಹೇಳಲು ಇಚ್ಚಿಸದ ಗುತ್ತಿಗೆ ನೌಕರರೊಬ್ಬರು ಹೇಳಿದರು.

ಗುತ್ತಿಗೆ ನೌಕರರ ವೇತನದ ಸಮಸ್ಯೆ ಆರೋಗ್ಯ ಇಲಾಖೆಯ ಗಮನಕ್ಕಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಂದ ತಕ್ಷಣ ವೇತನ ಪಾವತಿ ಮಾಡಲಾಗುವುದು
ಡಾ.ಯಲ್ಲಾ ರಮೇಶ್‍ಬಾಬು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.