ADVERTISEMENT

ತೆಕ್ಕಲಕೋಟೆ: ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:35 IST
Last Updated 1 ನವೆಂಬರ್ 2025, 5:35 IST
   

ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಕುರಿತಂತೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ನ.6ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಪಡಿಸಿದೆ.
ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಅಧಿಕಾರ ಅವಧಿ 60 ತಿಂಗಳಿದ್ದು, ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ಇಲ್ಲಿನ ಪಂಚಾಯಿತಿ ಅಧ್ಯಕ್ಷ ಸೇರಿ 20 ಸದಸ್ಯರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.

2025ರ ನ.6ಕ್ಕೆ ಪುರಸಭೆ ಆಡಳಿತ ಮಂಡಳಿಯ ಅಧಿಕಾರ ಅವಧಿ ಮುಗಿಯಲಿದ್ದು ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿತ್ತು.

ಹಿನ್ನೆಲೆ: 2020 ಫೆ 19ರಂದು ಪ.ಪಂ ಸದಸ್ಯರ ಚುನಾವಣೆ ನಡೆದು, ಫೆ.11ರಂದು ಫಲಿತಾಂಶ ಪ್ರಕಟವಾಗಿತ್ತು. 2020ರ ನ.7ರಂದು ಮೊದಲ ಅವಧಿ ಆರಂಭಗೊಂಡು 2023ರ ಆಗಸ್ಟ್‌ 22ರಂದು ಅಧ್ಯಕ್ಷ ಅವಧಿಯ ಕೊನೆಯ ಸಭೆ ನಡೆಯಿತು. 2023ರ ವಿಧಾನಸಭೆ ಚುನಾವಣಾ ನೀತಿಸಂಹಿತೆ ಜಾರಿಯಾಗಿ ಪುನಃ ಸಭೆ ನಡೆಯಲಿಲ್ಲ.

2023ರ ಮೇ 05ರಂದು ತಹಶೀಲ್ದಾರ್‌ ಆಡಳಿತಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದ 2024ರ ಆ.22ರವರೆಗೆ ಸದಸ್ಯರಿಗೆ ಆಡಳಿತ ಮುನ್ನೆಡೆಸಲು ಅವಕಾಶ ದೊರೆಯಲಿಲ್ಲ.

2024ರ ಆ.23ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು 2ನೇ ಅವಧಿ ಅಧಿಕಾರ ಶುರುವಾಯಿತು. ಎರಡು ವರ್ಷ ಆರು ತಿಂಗಳು ಅಧಿಕಾರ ನಡೆಸಬೇಕಿದ್ದರಿಂದ 2027ರ ಫೆ.6ಕ್ಕೆ ಎರಡನೇ ಅಧಿಕಾರ ಅವಧಿ ಮುಕ್ತಾಯಗೊಳ್ಳಬೇಕಿದೆ. ಎರಡನೇ ಅವಧಿಗೆ 30 ತಿಂಗಳ ಆಡಳಿತಕ್ಕೆ ಅವಕಾಶ ದೊರಕಿಸಿಕೊಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಲಾಗಿದೆ.

ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕಕ್ಕೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವ ಮಾಹಿತಿ ಇನ್ನು ಕಚೇರಿಗೆ ಲಭ್ಯವಾಗಿಲ್ಲ ಎಂದು ಮುಖ್ಯಾಧಿಕಾರಿ ಪರಶುರಾಮ ತಿಳಿಸಿದರು.

ಪಟ್ಟಣ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವುದು ವಿಳಂಬವಾಗಿದೆ. ಅಧಿಕಾರ ವಂಚಿತ ಅವಧಿಯನ್ನು ಪೂರ್ಣ ಮಾಡಲು ಅವಕಾಶ ನೀಡುವಂತೆ ನ್ಯಾಯಾಲದ ಮೆಟ್ಟಿಲೇರಿದ್ದು, ಅ.30ರಂದು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಅಧ್ಯಕ್ಷ ಎಸ್.ಆನಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT