ADVERTISEMENT

ಕನಸಾಗಿಯೇ ಉಳಿದ ಹೈಟೆಕ್‌ ತರಕಾರಿ ಮಾರುಕಟ್ಟೆ

₹3.5 ಕೋಟಿ ವೆಚ್ಚದ ಕಾಮಗಾರಿ ನನೆಗುದಿಗೆ; ತಾತ್ಕಾಲಿಕ ಶೆಡ್‌, ರಸ್ತೆಬದಿಯಲ್ಲಿಯೇ ವ್ಯಾಪಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಅಕ್ಟೋಬರ್ 2019, 19:30 IST
Last Updated 6 ಅಕ್ಟೋಬರ್ 2019, 19:30 IST
ನೆಲಸಮಗೊಳಿಸಿರುವ ಹಳೆಯ ಮಾರುಕಟ್ಟೆ ಕಟ್ಟಡ
ನೆಲಸಮಗೊಳಿಸಿರುವ ಹಳೆಯ ಮಾರುಕಟ್ಟೆ ಕಟ್ಟಡ   

ಹೊಸಪೇಟೆ: ಇಲ್ಲಿನ ಉದ್ಯೋಗ ಪೆಟ್ರೋಲ್‌ ಬಂಕ್‌ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ತರಕಾರಿ ಮಾರುಕಟ್ಟೆ ಕನಸಾಗಿಯೇ ಉಳಿದಿದೆ.

ಎರಡು ವರ್ಷಗಳಾಗುತ್ತ ಬಂದರೂ ಮಾರುಕಟ್ಟೆ ನಿರ್ಮಾಣ ಕೆಲಸ ಆರಂಭಗೊಂಡಿಲ್ಲ. ತರಕಾರಿ ವ್ಯಾಪಾರಿಗಳು ಅನರ್ಹ ಶಾಸಕ ಆನಂದ್‌ ಸಿಂಗ್‌ ನಿರ್ಮಿಸಿಕೊಟ್ಟಿರುವ ತಾತ್ಕಾಲಿಕ ಶೆಡ್‌ನಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಅನೇಕ ಜನರಿಗೆ ಅಲ್ಲಿ ಸ್ಥಳಾವಕಾಶ ಸಿಗದ ಕಾರಣ ಕೆಲವರು ರಸ್ತೆಬದಿಯಲ್ಲಿ, ಮತ್ತೆ ಕೆಲವರು ಊರೂರು ಅಲೆಯುತ್ತ ತರಕಾರಿ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ.

ಮಾರುಕಟ್ಟೆ ನಿರ್ಮಾಣಕ್ಕೆ 2017ರ ಡಿಸೆಂಬರ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. 2018ರ ಫೆಬ್ರುವರಿ 11ರಂದು ಹಳೆಯ ತರಕಾರಿ ಮಾರುಕಟ್ಟೆ ನೆಲಸಮಗೊಳಿಸಲಾಯಿತು. ಆರು ತಿಂಗಳೊಳಗೆ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಆದರೆ, ಮೂರು ತಿಂಗಳ ಬಳಿಕ ಯೋಜನೆಯನ್ನು ಪರಿಷ್ಕರಿಸಿ ₹1.5 ಕೋಟಿ ಮೊತ್ತದ ಕಾಮಗಾರಿಯನ್ನು ₹3.5 ಕೋಟಿಗೆ ಹೆಚ್ಚಿಸಲಾಯಿತು.

ADVERTISEMENT

ಸುಸಜ್ಜಿತವಾದ ತರಕಾರಿ ಮಾರುಕಟ್ಟೆಯ ಪರಿಷ್ಕೃತ ಯೋಜನೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಜಿ+2 ಮಾದರಿ ಸೇರಿಕೊಂಡಿತು. ಆದರೆ, ನಂತರ ಯಾವುದೇ ರೀತಿಯ ಬೆಳವಣಿಗೆ ನಡೆಯಲಿಲ್ಲ. ಹಳೆಯ ತರಕಾರಿ ಮಾರುಕಟ್ಟೆ ಜಾಗ ಸದ್ಯ ಸ್ಮಶಾನ ಭೂಮಿಯಂತೆ ಗೋಚರಿಸುತ್ತಿದೆ. ಬಿಡಾಡಿ ದನಗಳು, ನಾಯಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೆಲವರು ವಾಹನಗಳನ್ನು ಅಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿ ಹೋಗುತ್ತಿದ್ದಾರೆ. ಮೂತ್ರ ವಿಸರ್ಜನೆ, ಕಸ ಎಸೆದು ಹೋಗುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ದುರ್ಗಂಧ ಹರಡಿದೆ.

ರಸ್ತೆಬದಿ ತರಕಾರಿ ಮಾರಾಟಕ್ಕೆ ಸಂಚಾರ ಪೊಲೀಸರು ನಿರ್ಬಂಧ ಹೇರಿರುವುದರಿಂದ ಸಣ್ಣ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಜೀವನ ನಡೆಸುವುದು ದುಸ್ತರವಾಗಿದೆ. ಅವರ ಭವಿಷ್ಯ ಅತಂತ್ರವಾಗಿದೆ. ಮಾರುಕಟ್ಟೆ ನಿರ್ಮಾಣಗೊಳ್ಳುವವರೆಗೆ ಅವರು ಅತಂತ್ರ ಪರಿಸ್ಥಿತಿಯಲ್ಲಿ ಬದುಕುವ ಸನ್ನಿವೇಶ ಸೃಷ್ಟಿಯಾಗಿದೆ.

2018ರ ನವೆಂಬರ್‌ನಲ್ಲಿ ಬಳ್ಳಾರಿ ಲೋಕಸಭೆ ಉಪಚುನಾವಣೆ, 2019ರ ಏಪ್ರಿಲ್‌ನಲ್ಲಿ ಸಾರ್ವತ್ರಿಕ ಚುನಾವಣೆ ಬಂದದ್ದರಿಂದ ಕಾಮಗಾರಿ ಆರಂಭಗೊಳ್ಳಲು ವಿಳಂಬವಾಯಿತು ಎಂದು ನಗರಸಭೆ ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ, ಅಲ್ಲಿ ವಿಳಂಬವಾಗುವ ಪ್ರಶ್ನೆಯೇ ಎದುರಾಗುವುದಿಲ್ಲ. ಏಕೆಂದರೆ ಇದುವರೆಗೆ ಕಾಮಗಾರಿಯೇ ಶುರುವಾಗಿಲ್ಲ. ಹಳೆಯ ಕಟ್ಟಡವನ್ನು ನೆಲಸಮಗೊಳಿಸಿದಾಗ ಯಾವ ಪರಿಸ್ಥಿತಿ ಇತ್ತೋ ಈಗಲೂ ಅದೇ ಪರಿಸ್ಥಿತಿ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.